ಕರೂರು ದುರಂತದ ಬೆನ್ನಲ್ಲೇ ಮತ್ತೆ ನಟ ವಿಜಯ್‌ ರಾಜಕೀಯ ರ‍್ಯಾಲಿಗೆ ಸಜ್ಜು!

ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತದ ನಂತರ, ತಮಿಳುನಾಡಿನ ರಾಜಕೀಯ ಚಟುವಟಿಕೆಯಿಂದ ಹಿಂದೆ ಸರಿದಿದ್ದ ನಟ ವಿಜಯ್‌ ನೇತೃತ್ವದ TVK ಪಕ್ಷ ಇದೀಗ ಮತ್ತೆ ಚಟುವಟಿಕೆಗೆ ಸಜ್ಜಾಗುತ್ತಿದೆ. ನವೆಂಬರ್‌ 5ರಂದು ಮಹಾಬಲಿಪುರಂನಲ್ಲಿ ಪಕ್ಷದ ಮಹತ್ವದ ಸಭೆ ಕರೆದಿದ್ದು, ಭವಿಷ್ಯದ ಕಾರ್ಯತಂತ್ರ ಹಾಗೂ ಪ್ರಚಾರ ಪುನರಾರಂಭದ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಸೆಪ್ಟೆಂಬರ್‌ 27ರಂದು ಕರೂರಿನಲ್ಲಿ ವಿಜಯ್‌ ಅವರ ಪ್ರಚಾರ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 41 ಮಂದಿ ಸಾವನ್ನಪ್ಪಿ, ಅನೇಕರು ಗಾಯಗೊಂಡಿದ್ದರು. ಈ ಘಟನೆ ನಂತರ TVK ಪಕ್ಷವು ಎಲ್ಲಾ ಸಾರ್ವಜನಿಕ ಚಟುವಟಿಕೆಗಳಿಗೆ ತಾತ್ಕಾಲಿಕ ಬ್ರೇಕ್‌ ನೀಡಿತ್ತು. ಸುಮಾರು ಒಂದು ತಿಂಗಳ ಬಳಿಕ ವಿಜಯ್‌ ಸಭೆ ಕರೆದಿರುವುದು ಪಕ್ಷದ ಮುಂದಿನ ರಾಜಕೀಯ ಹೆಜ್ಜೆಗೆ ಮಹತ್ವದ ಬೆಳವಣಿಗೆಯಾಗಿದೆ.

ನವೆಂಬರ್‌ 5ರ ಸಭೆಯಲ್ಲಿ ಪಕ್ಷದ ಮುಂದಿನ ಕಾರ್ಯಕ್ರಮಗಳು, ಪ್ರಚಾರ ತಂತ್ರಗಳು ಹಾಗೂ ಸದಸ್ಯರ ಸಂಘಟನೆ ಕುರಿತು ನಿರ್ಧಾರ ಕೈಗೊಳ್ಳಲಾಗುವ ಸಾಧ್ಯತೆ ಇದೆ. ವಿಜಯ್‌ ಅವರು ಪಕ್ಷದ ನಾಯಕರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಕಾಲ್ತುಳಿತದ ನಂತರ ಟಿವಿಕೆ ಪಕ್ಷದ ವಿರುದ್ಧ ಹಲವಾರು ರಾಜಕೀಯ ಕುತಂತ್ರಗಳು ನಡೆಯುತ್ತಿವೆ. ಆದರೆ ತಮಿಳುನಾಡಿನ ಜನರ ಬೆಂಬಲ ನಮ್ಮೊಂದಿಗೆ ಇದೆ.

ಜನರ ಹಿತಕ್ಕಾಗಿ ಹೋರಾಡುವ ಸಮಯ ಬಂದಿದೆ. ಮುಂದಿನ ಚಟುವಟಿಕೆಗಳನ್ನು ಅತ್ಯಂತ ಜಾಗರೂಕತೆಯಿಂದ, ಲೆಕ್ಕಾಚಾರ ಮತ್ತು ಸ್ಪಷ್ಟತೆಯೊಂದಿಗೆ ನಿರ್ವಹಿಸುವಂತೆ ಸದಸ್ಯರಿಗೆ ಸೂಚಿಸಿದ್ದಾರೆ. ಕರೂರು ಕಾಲ್ತುಳಿತ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಆದೇಶ ಹೊರಡಿಸಿದೆ.

ಮದ್ರಾಸ್‌ ಹೈಕೋರ್ಟ್‌ ಮೊದಲು ಎಸ್‌ಐಟಿ ರಚಿಸಲು ಸೂಚಿಸಿತ್ತು. ಆದರೆ ಅದರಲ್ಲಿ ರಾಜ್ಯ ಪೊಲೀಸ್‌ ಅಧಿಕಾರಿಗಳೇ ಸೇರಿದ್ದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಟಿವಿಕೆ ಪಕ್ಷ ವಾದಿಸಿತ್ತು. ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಈಗ ಪ್ರಕರಣದ ತನಿಖೆ ಕೇಂದ್ರ ಸಂಸ್ಥೆಯ ಕೈಗೆ ಹೋಗಿದೆ. ಒಟ್ಟಾರೆಯಾಗಿ ನವೆಂಬರ್‌ 5ರ ಸಭೆಯು ಟಿವಿಕೆ ಪಕ್ಷದ ಮುಂದಿನ ದಿಕ್ಕು ನಿರ್ಧರಿಸುವ ತೀರ್ಮಾನಕಾರಿ ಹಂತವಾಗಲಿದೆ. ವಿಜಯ್‌ ಅವರು ಮತ್ತೆ ಪ್ರಚಾರಕ್ಕೆ ಧುಮುಕಲಿದ್ದಾರೆ ಎಂಬ ನಿರೀಕ್ಷೆ ಪಕ್ಷದೊಳಗೆ ಬಲವಾಗುತ್ತಿದೆ.

ವರದಿ : ಲಾವಣ್ಯ ಅನಿಗೋಳ

About The Author