ಸಿಎಂ ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿ ಮೀಸಲಾತಿ ಪರಿಷ್ಕರಣೆ ಮಾಡಿದ್ದಾಯ್ತು. ಈಗ ಕುರುಬ ಸಮುದಾಯದ ಸರದಿ. ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಬಗ್ಗೆ ಚರ್ಚಿಸಲು, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳು ಇಂದು ಸಭೆ ಕರೆದಿದ್ದಾರೆ. ಇಂದು ಮಹತ್ವದ ಸಭೆ ನಡೆಯುತ್ತಿದೆ. ಸಭೆಯ ಸೂಚನಾ ಪತ್ರದಲ್ಲಿ ಮುಖ್ಯವಾಗಿ 2 ಅಜೆಂಡಾಗಳನ್ನು ಉಲ್ಲೇಖಿಸಲಾಗಿದೆ.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವುದು ಮತ್ತು ಬೀದರ್, ಕಲ್ಬುರ್ಗಿ, ಯಾದಗಿರಿ ಜಿಲ್ಲೆಗಳ ಕುರುಬ ಸಮುದಾಯವು, ಕರ್ನಾಟಕದ ಗೊಂಡ ಸಮುದಾಯದ ಜೊತೆ ಹೊಂದಿರುವ ಸಾಮ್ಯತೆ ಬಗ್ಗೆಯೂ ಚರ್ಚೆ ನಡೆಯಲಿದೆ. ಸಭೆಗೆ ಅಗತ್ಯ ಮಾಹಿತಿ ಮತ್ತು ದಾಖಲೆಗಳೊಂದಿಗೆ ಹಾಜರಾಗುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ರಾಜ್ಯದಲ್ಲಿ ಕುರುಬ ಸಮುದಾಯ 2ಎ ಗ್ರೂಪ್ ನಲ್ಲಿದ್ದು, ಶೇಕಡ 15ರಷ್ಟು ಮೀಸಲಾತಿ ಸೌಲಭ್ಯ ಪಡೆಯುತ್ತಿದೆ. 2ಎ ಗ್ರೂಪ್‌ನಲ್ಲಿ ಕುರುಬ, ವಿಶ್ವಕರ್ಮ, ಕುಂಬಾರ, ದೇವಾಂಗ, ನೇಕಾರ, ಮಡಿವಾಳ, ಅಗಸ, ತಿಗಳ, ಪಟ್ಟೇಗಾರ, ಬೌದ್ಧ ಸೇರಿದಂತೆ 100 ಸಮುದಾಯಗಳಿವೆ.
ಪರಿಶಿಷ್ಟ ಪಂಗಡಗಳಿಗೆ ರಾಜ್ಯದಲ್ಲಿ ಶೇಕಡ 7ರಷ್ಟು ಮೀಸಲಾತಿ ಸೌಲಭ್ಯವನ್ನು ನೀಡಲಾಗಿದೆ. ವಾಲ್ಮೀಕಿ ನಾಯಕ ಸೇರಿ 51 ಸಮುದಾಯಗಳು ಎಸ್.ಟಿ. ಮೀಸಲಾತಿ ಲಾಭ ಹಾಗೂ ಸೌಲಭ್ಯವನ್ನು ಪಡೆಯುತ್ತಿವೆ. ಒಂದು ವೇಳೆ ಕುರುಬ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರ್ಪಡೆ ಮಾಡಿದ್ರೆ, ಶೇಕಡ 7ರ ಮೀಸಲಾತಿಯನ್ನು ಹಂಚಿಕೊಳ್ಳಬೇಕಾಗುತ್ತೆ. ಇದಕ್ಕೆ ವಾಲ್ಮೀಕಿ ನಾಯಕ ಸಮುದಾಯ ಸಿದ್ಧವಿದೆಯೇ ಎಂಬ ಪ್ರಶ್ನೆ ಸೃಷ್ಟಿಯಾಗಿದೆ.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ರೆ, ಪರಿಶಿಷ್ಟ ಪಂಗಡಕ್ಕೆ ಮೀಸಲಾದ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರಗಳಲ್ಲೂ, ಸ್ಪರ್ಧಿಸುವ ಅವಕಾಶ ಸಿಗುತ್ತೆ. ರಾಜಕೀಯ ಮೀಸಲಾತಿ ಪಡೆಯುವ ಉದ್ದೇಶವೂ ಎಸ್‌ಟಿಗೆ ಸೇರ್ಪಡೆಯ ಪ್ರಯತ್ನದ ಹಿಂದೆ ಇದೆ ಎನ್ನಲಾಗ್ತಿದೆ