ಸಾರಿಗೆ ನೌಕರರ ಮುಷ್ಕರದ ಬೆನ್ನಲ್ಲೇ, ರಾಜ್ಯ ಸರ್ಕಾರಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿಗೆ ಕರೆ ಕೊಟ್ಟಿದ್ದಾರೆ. ಆಗಸ್ಟ್ 12, 13, 14ರಂದು, 3 ದಿನಗಳ ಕಾಲ ಹೋರಾಟಕ್ಕೆ ಧುಮುಕಲಿದ್ದಾರೆ.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಹೋರಾಟಕ್ಕೆ ಕರೆ ಕೊಟ್ಟಿದೆ. ಆಗಸ್ಟ್ 1ರಂದು ನಡೆದ ಸುದ್ದಿಗೋಷ್ಠಿಯಲ್ಲಿ, ಪ್ರತಿಭಟನೆಯ ಬಗ್ಗೆ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಮಾಹಿತಿ ನೀಡಿದ್ರು. ಜನವರಿಯಲ್ಲಿ ನಡೆದ ಪ್ರತಿಭಟನೆ ವೇಳೆ, 15 ಸಾವಿರ ಗೌರವ ಧನ ನಿಗದಿಗೆ ಆಗ್ರಹಿಸಲಾಗಿತ್ತು. ಆಗ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮಾಡಿ, 10 ಸಾವಿರ ನೀಡೋದಾಗಿ ಘೋಷಿಸಿದ್ರು. ಆದರೆ ಇದುವರೆಗೆ ಆದೇಶ ಹೊರಡಿಸಿಲ್ಲ. ಹೀಗಾಗಿ ಮೂರು ದಿನಗಳ ಕಾಲ ರಾಜ್ಯಾದ್ಯಂತ ಪ್ರತಿಭಟನೆ ಮಾಡೋದಾಗಿ ಹೇಳಿದ್ರು.
ಏಪ್ರಿಲ್ ತಿಂಗಳಿಂದಲೇ ಅನ್ವಯವಾಗುವಂತೆ, 10 ಸಾವಿರ ರೂ. ಗೌರವ ಧನ ನೀಡಲೇಬೇಕು. ಈ ವರ್ಷದ ಬಜೆಟ್‌ನಲ್ಲೇ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ, 1000 ರೂ. ಪ್ರೋತ್ಸಾಹ ಧನ ನೀಡಬೇಕು. ಅವೈಜ್ಞಾನಿಕ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
ಒಟ್ನಲ್ಲಿ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ ತಟ್ಟುತ್ತಿದೆ. ಆಗಸ್ಟ್ 5ರಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ. ಈ ತಲೆಬಿಸಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ, ಆಶಾ ಕಾರ್ಯಕರ್ತೆರ ಪ್ರತಿಭಟನೆ ಸವಾಲಾಗಿದೆ.