ನವದೆಹಲಿ : ಕಳೆದ ವರ್ಷ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ದೇಶದ ಕಾರ್ಮಿಕ ಒಕ್ಕೂಟಗಳು ಸಲ್ಲಿಸಿದ್ದ 17 ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳು ಬುಧವಾರ ಬಾರತ್ ಬಂದ್‌ಗೆ ಕರೆ ನೀಡಿವೆ.
ಬ್ಯಾಂಕಿಂಗ್, ವಿಮೆ, ಅಂಚೆ ಸೇವೆಗಳಿಂದ ಹಿಡಿದು ಕಲ್ಲಿದ್ದಲು ಗಣಿಗಾರಿಕೆಯವರೆಗಿನ ಕ್ಷೇತ್ರಗಳ 25 ಕೋಟಿಗೂ ಅಧಿಕ ಕಾರ್ಮಿಕರು ಈ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 10 ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಕರೆ ನೀಡಿರುವ ಈ ಮುಷ್ಕರವನ್ನು ಕೇಂದ್ರ ಸರ್ಕಾರವು “ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಎಂದು ಟೀಕೆ ಮಾಡಿರುವುದನ್ನು ವಿರೋಧಿಸಿ ‘ಭಾರತ್ ಬಂದ್’ ನಡೆಯಲಿದೆ ಎನ್ನಲಾಗುತ್ತಿದೆ.
ಇನ್ನೂ ಸರ್ಕಾರ ನಮ್ಮ ಬೇಡಿಕೆಗಳನ್ನು ನಿರ್ಲಕ್ಷ್ಯಿಸಿದ್ದು, ಕಳೆದ ದಶಕದಿಂದ ವಾರ್ಷಿಕ ಕಾರ್ಮಿಕ ಸಮ್ಮೇಳನವನ್ನು ಕರೆಯಲು ವಿಫಲವಾಗಿದೆ ಎಂದು ಒಕ್ಕೂಟಗಳು ಆರೋಪಿಸಿವೆ. ಅಲ್ಲದೆ ಈ ರೀತಿಯ ನಡೆಯು ಸರ್ಕಾರಕ್ಕೆ ಕಾರ್ಮಿಕರ ಮೇಲಿರುವ ನಿರಾಸಕ್ತಿಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಅಲ್ಲದೆ ಈ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಲು ಕಾರ್ಮಿಕ ಸಂಘಗಳು ಕರೆ ನೀಡಿವೆ. ಔಪಚಾರಿಕ ಮತ್ತು ಈಗಾಗಲೇ ಈ ಬಂದ್‌ಗಾಗಿ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ದೇಶಾದ್ಯಂತ ರೈತರು ಮತ್ತು ಗ್ರಾಮೀಣ ಕಾರ್ಮಿಕರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಎಐಟಿಯುಸಿ ನ ಅಮರ್‌ಜೀತ್ ಕೌರ್ ತಿಳಿಸಿದ್ದಾರೆ.
ಈ ಬಂದ್‌ನಿಂದ ಪ್ರಮುಖ ಸಾರ್ವಜನಿಕ ಸೇವೆಗಳು ಮತ್ತು ಕೈಗಾರಿಕೆಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಷ್ಕರದಿಂದಾಗಿ ಬ್ಯಾಂಕಿಂಗ್ ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಕಾರ್ಖಾನೆಗಳು ಮತ್ತು ರಾಜ್ಯ ಸಾರಿಗೆ ಸೇವೆಗಳೂ ಸ್ಥಬ್ಧವಾಗುವ ಸಾಧ್ಯತೆಗಳಿವೆ ಎಂದು ಹಿಂದ್ ಮಜ್ದೂರ್ ಸಭಾದ ಹರ್ಭಜನ್ ಸಿಂಗ್ ಸಿಧು ಹೇಳಿದ್ದಾರೆ.
ಪ್ರಮುಖವಾಗಿ ನಾಲ್ಕು ಹೊಸ ಕಾರ್ಮಿಕ ನೀತಿಗಳ ಪರಿಚಯ ಸೇರಿದಂತೆ ಸರ್ಕಾರದ ಕಾರ್ಮಿಕ ಕಲ್ಯಾಣ, ಹಕ್ಕುಗಳನ್ನು ಕಸಿದುಕೊಳ್ಳಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂದು ಜಂಟಿ ಹೇಳಿಕೆಯಲ್ಲಿ ವೇದಿಕೆ ಆರೋಪಿಸಿದೆ.
ಈ ಸಂಹಿತೆಗಳು, ಕಾರ್ಮಿಕರ ಸಾಮೂಹಿಕ ನಾಯಕತ್ವ ದುರ್ಬಲಗೊಳಿಸಲು, ಒಕ್ಕೂಟದ ಚಟುವಟಿಕೆಗಳಿಗೆ ಹಿನ್ನಡೆಯಾಗಲು, ಕೆಲಸದ ಸಮಯವನ್ನು ಹೆಚ್ಚಿಸಲು ಮತ್ತು ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಉದ್ಯಮಿಗಳನ್ನು ತಮ್ಮ ಹೊಣೆಗಾರಿಕೆಯಿಂದ ರಕ್ಷಿಸಲು ಉದ್ದೇಶಿಸಿವೆ ಎಂದು ಒಕ್ಕೂಟಗಳು ವಾದಿಸಿವೆ.
ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಪಬ್ಲಿಕ್ ಸೇವೆಗಳ ಖಾಸಗೀಕರಣ, ಹೊರಗುತ್ತಿಗೆ ನೀತಿಗಳು, ಗುತ್ತಿಗೆದಾರೀಕರಣದ ವಿರುದ್ಧ ಕಾರ್ಮಿಕ ಸಂಘಗಳು ಹೋರಾಡುತ್ತಿವೆ. ಸಂಸತ್ತು ಅಂಗೀಕರಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಟ್ರೇಡ್ ಯೂನಿಯನ್ ಚಳುವಳಿಯನ್ನು ಹತ್ತಿಕ್ಕಲು, ಕೆಲಸದ ಅವಧಿಯನ್ನು ಹೆಚ್ಚಿಸಲು, ಕಾರ್ಮಿಕರ ಸಂಘಟನೆಗಳಿಗೆ ತೊಂದರೆ ನೀಡುವುದು, ಮುಷ್ಕರ ಮಾಡುವ ಹಕ್ಕನ್ನು ಕಸಿದುಕೊಳ್ಳಲು ಮತ್ತು ಉದ್ಯಮಿಗಳು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುವುದನ್ನು ಅಪರಾಧವಲ್ಲ ಎಂದಿರುವುದಕ್ಕೆ ಸಂಘಟನೆಗಳು ಸಿಡಿದೆದ್ದಿವೆ.