ನವೆಂಬರ್ ತಿಂಗಳು ಹತ್ತಿರವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ, ಮತ್ತೆ ಸಚಿವ ಸಂಪುಟ ಪುನಾರಚನೆ ಚರ್ಚೆ ಜೋರಾಗಿದೆ. ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದುಕೊಳ್ಳಲೇಬೇಕೆಂದು, ಕೆಲ ನಾಯಕರು ಲಾಬಿ ನಡೆಸುತ್ತಿದ್ದಾರೆ. ಹೈಕಮಾಂಡ್ ಮಟ್ಟದಲ್ಲೂ ಪ್ರಯತ್ನ ಮಾಡ್ತಿದ್ದಾರೆ. ಮತ್ತೊಂದು ಕಡೆ ಸಚಿವ ಸ್ಥಾನ ಉಳಿಸಿಕೊಳ್ಳಲು ಸಚಿವರು ಹರಸಾಹಸ ಪಡ್ತಿದ್ದಾರೆ. ಇದೇ ವೇಳೆ ಎಂಎಲ್‌ಸಿ ಸಲೀಂ ಅಹಮದ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ನವೆಂಬರ್‌ನಲ್ಲಿ ಶೇಕಡ 50ರಷ್ಟು ಕ್ಯಾಬಿನೆಟ್ ಸಚಿವರಿಗೆ ಗೇಟ್‌ಪಾಸ್ ಕೊಡಲಾಗುತ್ತಂತೆ. ಈಗಾಗಲೇ ಸಿಎಂ, ಹಿರಿಯ ನಾಯಕರಿಗೆ ಹೇಳಿದ್ದೇವೆ. ಶೇಕಡಾ 50ರಷ್ಟು ಸಚಿವರಿಗೆ ಪಕ್ಷದ ಜವಾಬ್ದಾರಿಯನ್ನು ಕೊಡಲಾಗುತ್ತದೆ. ಜೊತೆಗೆ ಸಂಘಟನೆಯ ಹೊಣೆ ವಹಿಸಲಾಗುತ್ತದೆ. ಹೊಸಬರಿಗೆ ಅವಕಾಶ ಮಾಡಿಕೊಡಬೇಕೆಂಬ ಬಗ್ಗೆಯೂ ಹೇಳಿದ್ದೇವೆ. 2023ರಲ್ಲಿ ನಾನು ವರ್ಕಿಂಗ್ ಪ್ರೆಸಿಡೆಂಟ್ ಆಗಿದ್ದೆ. ಸಂಪುಟ ರಚನೆ ವೇಳೆ ನನಗೆ ಅನ್ಯಾಯವಾಗಿತ್ತು. ಇದೀಗ ಮುಂದಿನ ಕ್ಯಾಬಿನೆಟ್‌ನಲ್ಲಿ ಅವಕಾಶ ಮಾಡಿಕೊಡುವ ವಿಶ್ವಾಸ ಇದೆ ಅಂತಾ ಹೇಳಿದ್ರು.
ಹೈಕಮಾಂಡ್ ವರಿಷ್ಠರು ರಿಪೋರ್ಟ್ ಕಾರ್ಡ್ ಹಿಡಿದು, ಸಚಿವರೊಂದಿಗೆ ಮುಖಾಮುಖಿ ಮೀಟಿಂಗ್ ಮಾಡ್ತಿದ್ದಾರೆ. ಹಿಂದಿನ 2 ವರ್ಷಗಳ ಕಾರ್ಯವೈಖರಿ ಬಗ್ಗೆ, ನೇರಾನೇರ ಪ್ರಶ್ನೆ ಕೇಳ್ತಿದ್ದಾರೆ. ಸಂಪುಟ ಪುನಾರಚನೆ ವೇಳೆ 2ನೇ ದರ್ಜೆ ನಾಯಕರಿಗೆ ಅವಕಾಶ ಕೊಡಲಾಗುತ್ತಂತೆ.
ಸಮುದಾಯದಲ್ಲಿ ನಾಯಕರ ಪ್ರಭಾವ ಮತ್ತು ಸಮುದಾಯಗಳನ್ನು ಸೆಳೆಯುವ ಸಾಮರ್ಥ್ಯ ಇರೋರಿಗೆ, ಸ್ಥಾನಮಾನ ಕೊಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗ್ತಿದೆ. ಜೊತೆಗೆ ಪಕ್ಷದ ಸಿದ್ಧಾಂತಗಳ ಜೊತೆ ಗಟ್ಟಿಯಾಗಿ ನಿಲ್ಲುವವರಿಗೆ, ಮೊದಲ ಆದ್ಯತೆ ನೀಡುವ ಬಗ್ಗೆಯೂ ಚಿಂತಿಸಲಾಗ್ತಿದೆ. ಒಟ್ನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯಕ್ಕಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ತಿದ್ದು, ನಾಯಕರಿಗೆ ಸತ್ವ ಪರೀಕ್ಷೆಯ ಕಾಲ ಎದುರಾಗಿದೆ.