ಮಹಾರಾಷ್ಟ್ರ: ಮಹಾ ಮಳೆಗೆ ಜಿಲ್ಲೆ ಬಹುತೇಕ ತತ್ತರಿಸಿ ಹೋಗಿರುವ ಮಧ್ಯೆಯೇ ಪ್ರವಾಹದಿಂದಾಗಿ ಚಲಿಸಲಾಗದೇ ನಡುನೀರಿನಲ್ಲಿ ನಿಂತಿದ್ದ ಮಹಾಲಕ್ಷ್ಮಿ ಪ್ಯಾಸೆಂಜರ್ ರೈಲಿನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರೆಲ್ಲರನ್ನೂ ರಕ್ಷಿಸಲಾಗಿದೆ.
ಮುಂಬೈ-ಕೊಲ್ಹಾಪುರ ಮಧ್ಯೆ ಸಂಚರಿಸುತ್ತಿದ್ದ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಇಂದು ಬೆಳಗ್ಗೆ ಉಕ್ಕಿಹರಿಯುತ್ತಿದ್ದ ಉಲ್ಹಾಸ್ ನದಿಯ ಪ್ರವಾಹಕ್ಕೆ ಸಿಲುಕಿ ಚಲಿಸಲಾಗದೆ ನಡುನೀರಿನಲ್ಲೇ ನಿಂತುಬಿಟ್ಟಿತ್ತು. ಇಲ್ಲಿನ ವಂಗ್ನಿ ಎಂಬ ಪ್ರದೇಶದಲ್ಲಿ ರೈಲ್ವೆ ಹಳಿಯೂ ಕಾಣದಂತೆ ಹರಿಯುತ್ತಿದ್ದ ನೀರಿನಿಂದಾಗಿ ದಿಕ್ಕು ತೋಚದ ಲೋಕೋ ಪೈಲಟ್ ರೈಲನ್ನು ನಿಲ್ಲಿಸಿದ್ರು. ಇದರಿಂದ ಆತಂಕಗೊಂಡ ಪ್ರಯಾಣಿಕರು ರಕ್ಷಣೆಗಾಗಿ ಕಾಯುತ್ತಾಕುಳಿತಿದ್ರು. ಇನ್ನು ಸುದ್ದಿ ತಿಳಿದ ಎನ್ ಡಿಆರ್ ಎಫ್ ತಂಡ ಸ್ಥಳಕ್ಕೆ ಬಂದು ರಬ್ಬರ್ ದೋಣಿಯ ಮೂಲಕ ಪ್ರಯಾಣಿಕರನ್ನು ರಕ್ಷಿಸೋ ಕಾರ್ಯಾಚರಣೆ ನಡೆಸಿ ಪ್ರಯಾಣಿಕರನ್ನು ರಕ್ಷಿಸಿದೆ.
ಇನ್ನು ಏರ್ ಲಿಫ್ಟ್ ಮೂಲಕ ಪ್ರಯಾಣಿಕರ ರಕ್ಷಣೆಗೆ ವಾಯುಪಡೆಯ ಹೆಲಿಕಾಪ್ಟರ್ ಕೂಡ ಸ್ಥಳಕ್ಕೆ ಬಂದಿತ್ತು, ಆದರೆ ಮಳೆಯ ಕಾರಣದಿಂದಾಗಿ ಹೆಲಿಕಾಪ್ಟರ್ ಕಾರ್ಯಾಚರಣೆಗೆ ಅಡ್ಡಿಯುಂಟಾಯ್ತು. ಸ್ಥಳಕ್ಕೆ ಬಂದಿದ್ದ ಎನ್ ಡಿಆರ್ ಎಫ್ ನ 8ಕ್ಕೂ ಅಧಿಕ ಬೋಟ್ ಗಳ ಮೂಲಕ ರೈಲಿನಲ್ಲಿ ಸಿಲುಕಿದ್ದ ಪ್ರಯಾಣಿಕರೆಲ್ಲರನ್ನೂ ರಕ್ಷಣೆ ಮಾಡಲಾಗಿದೆ. ರಕ್ಷಿಸಲ್ಪಟ್ಟ ಎಲ್ಲಾ ಪ್ರಯಾಣಿಕರನ್ನು ಇದೀಗ ಬದ್ಲಾಪುರ್ ಗೆ ಸ್ಥಳಾಂತರಿಸಿರುವ ರೈಲ್ವೇ ಅಧಿಕಾರಿಗಳು ಅವರ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಿದ್ದಾರೆ.