Wednesday, December 11, 2024

Latest Posts

ಏನಿದು ವಕ್ಫ್ ವಿವಾದ? – ದಾನ ಕೊಟ್ಟ ಇತಿಹಾಸ

- Advertisement -

ದೇಶದಲ್ಲಿ ಕೆಲ ದಿನಗಳಿಂದ ವಕ್ಫ್‌ ಬೋರ್ಡ್‌ಗೆ ಸಂಬಂಧಿಸಿದಂತೆ ಭಾರೀ ಚರ್ಚೆಯಾಗುತ್ತಿದೆ. ವಕ್ಫ್‌ ಬೋರ್ಡ್‌ಗೆ ಸೇರಿದ ಜಮೀನು ವಿವಾದ ದೇಶದಲ್ಲಷ್ಟೇ ಅಲ್ಲ ಕರ್ನಾಟಕದಲ್ಲೂ ಇದೆ. ಮುಸ್ಲಿಮರ ವಕ್ಫ್ ಬೋರ್ಡ್ ಸಾವಿರಾರು ಎಕರೆ ಜಮೀನುಗಳನ್ನು ತನ್ನದು ಅಂತ ಹಕ್ಕು ಮಂಡಿಸುತ್ತಿದೆ. ವಕ್ಫ್​ ಬೋರ್ಡ್​ ಈಗ ಲ್ಯಾಂಡ್ ಜಿಹಾದ್ ಶುರುಮಾಡಿದೆ ಅಂತ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ. ಇದಕ್ಕೂ ಮೊದಲು ವಕ್ಫ್‌ ಬೋರ್ಡ್‌ನ ಜಮೀನು ವಿವಾದ ಯಾಕೆ ಶುರುವಾಯ್ತು.. ಇದು ಲ್ಯಾಂಡ್ ಜಿಹಾದಾ? ರೈತರ ಸಾವಿರಾರು ಎಕರೆ ಭೂಮಿಯ ಮೇಲೆ ಈ ವಕ್ಫ್ ಬೋರ್ಡ್ ಯಾಕೆ ಕಣ್ಣಿಟ್ಟಿದೆ.. ಇವೆಲ್ಲವನ್ನ ದಾನ ಕೊಟ್ಟಿದ್ಯಾರು? ಅಸಲಿಗೆ ವಕ್ಫ್ ಬೋರ್ಡ್ ಎಂದರೇನು ಅನ್ನೋದನ್ನ ವಿವರವಾಗಿ ತಿಳಿದುಕೊಳ್ಳೋಣ.

  • ವಕ್ಫ್ ಎಂದರೇನು?

ವಕ್ಫ್​​ ಅನ್ನೋದು ಒಂದು ಅರೆಬಿಕ್ ಪದ. ವಕ್ಫ್​ ಅಂದ್ರೆ ದೇವರ ಹೆಸರಿನಲ್ಲಿ ಸಮರ್ಪಿತವಾದ ವಸ್ತು ಅಂತಾರೆ. ಲೋಕೋಪಕಾರಕ್ಕಾಗಿ ನೀಡಿದ ಹಣ ಅಥವಾ ವಸ್ತು ಅನ್ನೋ ಅರ್ಥ ಬರುತ್ತೆ. ಇಲ್ಲಿ ಚರಾಸ್ಥಿ ಹಾಗೂ ಚಿರಾಸ್ಥಿ ಎರಡೂ ವಕ್ಫ್ ವ್ಯಾಪ್ತಿಗೆ ಬರುತ್ತೆ. ವಕ್ಫ್‌ಗೆ ಯಾವುದೇ ಮುಸ್ಲಿಂ ವ್ಯಕ್ತಿ ಹಣ, ಭೂಮಿ, ಮನೆ ಅಥವಾ ಇನ್ನಾವುದೇ ಬೆಲೆಬಾಳುವ ವಸ್ತುಗಳನ್ನ ದಾನ ಮಾಡಬಹುದು. ಈ ಆಸ್ತಿಗಳನ್ನು ನಿರ್ವಹಿಸೋಕೆ ಸ್ಥಳೀಯ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ವಕ್ಫ್ ಸಂಸ್ಥೆಗಳಿವೆ. ಇಸ್ಲಾಂನ ತಜ್ಞರ ಪ್ರಕಾರ, ವಕ್ಫ್ ಮಂಡಳಿಗೆ ದಾನ ಮಾಡಿದ ಆಸ್ತಿಯ ಉದ್ದೇಶ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡೋದು. ಬಡವರ ಶಿಕ್ಷಣ, ಶಾಲೆ, ಮಸೀದಿಗಳ ನಿರ್ಮಾಣ, ಮಸೀದಿಗಳ ನಿರ್ವಹಣೆ ಮತ್ತು ಇತರೆ ಮುಸ್ಲಿಂ ಧಾರ್ಮಿಕ ದತ್ತಿ ಕಾರ್ಯಗಳಿಗೆ ವ್ಯವಸ್ಥೆ ಮಾಡುವ ಉದ್ದೇಶ ಹೊಂದಿರಲಾಗುತ್ತೆ. ಭಾರತದ ವಕ್ಫ್ ಆಸ್ತಿ ನಿರ್ವಹಣಾ ವ್ಯವಸ್ಥೆಯ ಪ್ರಕಾರ, ದೇಶದಲ್ಲಿ ಒಟ್ಟು 30 ವಕ್ಫ್ ಮಂಡಳಿಗಳಿವೆ. ಅದರ ಬಹುತೇಕ ಕೇಂದ್ರ ಕಚೇರಿಗಳು ದೆಹಲಿಯಲ್ಲಿವೆ. ಕೇಂದ್ರ ಸರ್ಕಾರದ ಸೆಂಟ್ರಲ್ ವಕ್ಫ್ ಕೌನ್ಸಿಲ್ ಈ ವಕ್ಫ್ ಮಂಡಳಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತದೆ.

  • ಎಲ್ಲೆಲ್ಲಿ ವಿವಾದ?
    ವಕ್ಫ್​​ ಬೋರ್ಡ್ ಈಗ ದೇಶದ ಮೂಲೆ ಮೂಲೆಯಲ್ಲೂ ತನ್ನ ಮೀನಿಗಾಗಿ ಹಕ್ಕು ಸಾಧಿಸಿದೆ. ಅದರಲ್ಲಿ ಪ್ರಮುಖವಾಗಿ ತಮಿಳುನಾಡಿನ ತಿರುಚೆಂದೂರೈ ಎಂಬ ಸಂಪೂರ್ಣ ಹಳ್ಳಿ ವಕ್ಫ್​​ಬೋರ್ಡ್​ಗೆ ಸೇರಿದೆ ಎಂದು ಆರೋಪಿಸಲಾಗಿದೆ. ಕೇರಳದ ಕೊಚ್ಚಿ ಸಮೀಪದ ಇಡೀ ಹಳ್ಳಿಯ 610 ಕುಟುಂಬಗಳು ತಮ್ಮ ಆಸ್ತಿ ಕಳೆದುಕೊಳ್ಳೋ ಆತಂಕದಲ್ಲಿದೆ. ಕರ್ನಾಟಕದ ವಿಧಾನಸೌಧ, ತಾಜ್ ಮಹಲ್, ದೆಹಲಿ ವಿಮಾನ ನಿಲ್ದಾಣ, ಹೊಸ ಸಂಸತ್ ಭವನ ಹೀಗೆ ಹಲವು ಐತಿಹಾಸಿಕ ನಂಟು ಹೊಂದಿರುವ ಭೂಮಿಗಳು ವಕ್ಫ್‌ ಮಂಡಳಿಯ ಆಸ್ತಿ ಅನ್ನೋ ಆರೋಪಗಳು ಕೇಳಿ ಬರುತ್ತಿವೆ. ವಿಜಯಪುರ ಜಿಲ್ಲೆಯ ನೂರಾರು ರೈತರ ಜಮೀನು ಒಡೆತನಕ್ಕೂ ಮಂಡಳಿಯು ಹಕ್ಕು ಮಂಡಿಸಿದೆ. ಇದರ ಜೊತೆ ಚಾಮರಾಜನಗರದಿಂದ ಹಿಡಿದು ಬೀದರ್​ವರೆಗೂ ಎಲ್ಲೆಲ್ಲೂ ವಕ್ಫ್​ ಬೋರ್ಡ್ ತನ್ನ ಜಮೀನು ವಾಪಸ್ ಬಿಟ್ಟುಕೊಡುವಂತೆ ಹಕ್ಕು ಮಂಡಿಸ್ತಿದೆ…
  • ಭಾರತದಲ್ಲಿ ಯಾರ ಆಸ್ತಿ ಎಷ್ಟಿದೆ?
    ದೇಶದಲ್ಲಿ ಅತಿ ಹೆಚ್ಚು ಭೂಮಿ ಹೊಂದಿರೋದು ಭಾರತ ಸರ್ಕಾರ. ಇಡೀ ಭಾರತದ ವಿಸ್ತೀರ್ಣ 32,87,263 SQ ಕಿಲೋಮೀಟರ್​ ಇದೆ. ಇದ್ರಲ್ಲಿ ಭಾರತ ಸರ್ಕಾರದ ಬಳಿ ಬರೋಬ್ಬರಿ 15,531 SQ KM ಪ್ರದೇಶ ಇದೆ.. ಇದನ್ನ ಬಿಟ್ರೆ ಭಾರತೀಯ ಸೇನೆ ಬಳಿ 18 ಲಕ್ಷ ಎಕರೆ ಭೂ ಪ್ರದೇಶ ಇದೆ.. ಅಂದ್ರೆ ಸುಮಾರು 7,280 ಸ್ಕ್ವಯರ್ ಕಿಲೋಮೀಟರ್​​​ ಭೂ ಪ್ರದೇಶ ಭಾರತೀಯ ಸೇನೆ ಬಳಿ ಇದೆ. ಭಾರತೀಯ ರೈಲ್ವೆ ಬಳಿ 4 ಲಕ್ಷದ 86 ಸಾವಿರ ಹೆಕ್ಟೇರ್ ಭೂ ಪ್ರದೇಶ ಇದೆ. ಭಾರತ ಸರ್ಕಾರ ಬಿಟ್ರೆ 17 ಕೋಟಿ ಎಕರೆ ಭೂಮಿಯನ್ನ ಹೊಂದಿರೋದು ಭಾರತದ ಕ್ಯಾಥೋಲಿಕ್ ಚರ್ಚ್​ಗಳು. ಈ ಚರ್ಚ್​​ಗಳನ್ನ ಬಿಟ್ರೆ, ವಕ್ಫ್​​ ಬೋರ್ಡ್​ ಬಳಿ ಬರೋಬ್ಬರಿ 8 ಲಕ್ಷ ಎಕರೆ ಭೂಮಿ ಇದೆ.. 2009ರಲ್ಲಿ ವಕ್ಫ್​ ಬೋರ್ಡ್ ಬಳಿ 4 ಲಕ್ಷ ಎಕರೆ ಜಮೀನಿತ್ತು. ಇದಾದ ಕೆಲವೇ ವರ್ಷಗಳಲ್ಲಿ ಇದು ಡಬಲ್ ಆಗಿದೆ. ಈ ಭೂಮಿಯಲ್ಲಿ ಹೆಚ್ಚಾಗಿ ಮಸೀದಿಗಳು, ಮದರಸಾಗಳು, ಸ್ಮಶಾನಗಳಿವೆ..
  • ವಕ್ಫ್​ಗೆ ದಾನ ಮಾಡಿದ್ದು ಯಾರು?
    ಭಾರತದಲ್ಲಿ ಇಷ್ಟು ಪ್ರಮಾಣದ ಭೂಮಿಯನ್ನ ಯಾರು ಯಾವಾಗ ದಾನ ಮಾಡಿದ್ರು? ನೂರಾರು ವರ್ಷಗಳಿಂದ ರೈತರು ತಮ್ಮ ಜಮೀನು ಊಳುತ್ತಿದ್ದಾರೆ, ತಾವೇ ಮಾಲಿಕರಾಗಿದ್ದಾರೆ. ಆದ್ರೆ ಈಗ ಹೇಗೆ ವಕ್ಫ್​​ ಬೋರ್ಡ್​ ತನ್ನ ಆಸ್ತಿ ಅಂತ ಹೇಳಿಕೊಳ್ತಿದೆ? ಇದು ನಿಜಕ್ಕೂ ಕುತೂಹಲಕಾರಿ ವಿಚಾರ. ವಕ್ಫ್​​ಬೋರ್ಡ್​​ಗೆ ಈ ಜಮೀನನ್ನ ದಾನ ಮಾಡಿದ್ಯಾರು? ಯಾವಾಗ ಅನ್ನೋದನ್ನ ನೋಡೋಣ

ವಕ್ಫ್​ ಎನ್ನುವುದು ಇತ್ತೀಚೆಗೆ ಶುರು ಆಗಿದ್ದೇನಲ್ಲ. 1400 ವರ್ಷಗಳ ಹಿಂದೆನೇ ವಕ್ಫ್​ ಅನ್ನೋ ವ್ಯವಸ್ಥೆ ಇತ್ತು ಅನ್ನೋ ವಾದ ಇದೆ. ಶ್ರೀಮಂತರು, ಈ ಹಿಂದಿನ ರಾಜರುಗಳು ತಮಗೆ ಸೇರಿದ ಭೂ ಪ್ರದೇಶವನ್ನ ವಕ್ಫ್​​ಗೆ ದಾನ ಮಾಡ್ತಿದ್ರಂತೆ. ಭಾರತದ ಇತಿಹಾಸದಲ್ಲಿ ಈ ಬಗ್ಗೆ ನೋಡುವುದಾದರೆ, ಭಾರತದಲ್ಲಿ 1206ರಲ್ಲಿ ಮುಸ್ಲಿಂ ಆಳ್ವಿಕೆ ಶುರುವಾಯ್ತು. ಮಹಮದ್ ಘಜ್ನಿ, ಮಹಮದ್ ಘೋರಿ ದಾಳಿ ಬಳಿಕ ಭಾರತಕ್ಕೆ ಬಂದ ಕುತುಬುದ್ದೀನ್ ಐಬಕ್ ದೆಹಲಿಯಲ್ಲಿ ಮುಸ್ಲಿಮ್ ಆಳ್ವಿಕೆ ಶುರು ಮಾಡಿದರು. ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆ ಶುರು ಆಯ್ತು. ಇದಾದ್ಮೇಲೆ ದೇಶವನ್ನ ಮೊಘಲರು, ಖಿಲ್ಜಿ, ತುಘಲಕ್ ಸಂತತಿಯವರು ಭಾರತವನ್ನ ಆಳಿದ್ರು.. ದಕ್ಷಿಣ ಭಾರತದಲ್ಲಿ ಗುಲ್ಬರ್ಗಾದಲ್ಲಿ ಬಹಮನಿ ಸಾಮ್ರಾಜ್ಯ ಇತ್ತು.. ವಿಜಯಪುರದಲ್ಲಿ ಆದಿಲ್ ಶಾಹಿಗಳು, ಹೈದ್ರಾಬಾದ್​​ನ ನಿಜಾಮರು, ಮೈಸೂರಿನಲ್ಲಿ ಹೈದರ್ ಅಲಿ, ಟಿಪ್ಪು ಸುಲ್ತಾನ್ ಆಳ್ವಿಕೆ ನಡೆಸಿದ್ದರು. ಹೀಗೆ ನೂರಾರು ವರ್ಷಗಳ ಹಿಂದೆ ಭಾರತದ್ದೇ ನೆಲವನ್ನ ಆಕ್ರಮಿಸಿಕೊಂಡು ಮುಸ್ಲಿಂ ರಾಜರು ಆಳ್ವಿಕೆ ನಡೆಸಿದ್ರು. 1206ರಲ್ಲಿ ಕುತುಬುದ್ದೀನ್ ಐಬಕ್ ಭಾರತಕ್ಕೆ ಬಂದು ಸಾಮ್ರಾಜಸ್ಯ ಸ್ಥಾಪಿಸೋ ಮೊದಲು ಇಲ್ಲೆಲ್ಲಾ ಹಿಂದೂ ರಾಜರೇ ಇದ್ರು. ಅದಾದ್ಮೇಲೆ ಸುಮಾರು ವರ್ಷಗಳ ಕಾಲ ಮುಸ್ಲಿಂ ರಾಜರು ಭಾರತವನ್ನ ಆಕ್ರಮಿಸಿಕೊಂಡು ಆಳ್ವಿಕೆ ನಡೆಸಿದ್ರು. ಈ ಅವಧಿಯಲ್ಲಿ ಮುಸ್ಲಿಂ ರಾಜರುಗಳು ತಮ್ಮ ಧರ್ಮಾನುಸಾರ ತಾವು ಆಳ್ವಿಕೆ ಮಾಡ್ತಿದ್ದ ಬಹುಪಾಲು ಜಮೀನುಗಳನ್ನು ವಕ್ಫ್ ಮಾಡಿದ್ದರು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟು ವಿಭಜನೆ ಮಾಡಿದ ಮೇಲೆ ಸಾಕಷ್ಟು ಮುಸ್ಲಿಮರು ಪಾಕಿಸ್ತಾನಕ್ಕೆ ಹೋದ್ರು. ಆ ಟೈಮಲ್ಲಿ ಕೂಡ ಹಲವರು ತಮ್ಮ ಆಸ್ತಿಯನ್ನ ವಕ್ಫ್​​ಗೆ ದಾನ ಮಾಡಿ ಹೋಗಿದ್ರು.. ಇಂದಿಗೂ ಈ ಆಸ್ತಿಯಲ್ಲಿ ರಕ್ಷಿಸುವ ಹೊಣೆ ವಕ್ಫ್​​ ಬೋರ್ಡ್​​ನದ್ದು

ಬ್ರಿಟಿಷರ ಕಾಲದಿಂದಲೂ ವಕ್ಫ್ ವಿವಾದ ನಡೀತಿದೆ. ಈ ಆಸ್ತಿಗಾಗಿ​ ಹೋರಾಟ ನಡೆಯುತ್ತಿದೆ. ಬ್ರಿಟಿಷರ ಆಳ್ವಿಕೆಯಲ್ಲಿ, ವಕ್ಫ್ ಆಸ್ತಿಯ ಸ್ವಾಧೀನಕ್ಕೆ ಸಂಬಂಧಿಸಿದ ವಿವಾದವು ಲಂಡನ್‌ನ ಪ್ರಿವಿ ಕೌನ್ಸಿಲ್‌ಗೆ ತಲುಪುವಷ್ಟು ಹೆಚ್ಚಾಯಿತು. ಇದಾದ ನಂತರ ಬ್ರಿಟನ್‌ನಲ್ಲಿ ನಾಲ್ವರು ನ್ಯಾಯಾಧೀಶರ ಪೀಠ ವಕ್ಫ್ ಆಸ್ತಿಯನ್ನೇ ಅಕ್ರಮ ಅಂತ ಘೋಷಿಸಿದ್ದರು. ಆದರೆ, ಬ್ರಿಟನ್​​​ನಲ್ಲಿನ ಈ ನಿರ್ಧಾರವನ್ನು ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರ ಅಂಗೀಕರಿಸಲಿಲ್ಲ. 1913ರಲ್ಲಿ ವಕ್ಫ್ ದೃಢೀಕರಣ ಕಾಯಿದೆ ಜಾರಿಗೆ ತರುವ ಮೂಲಕ ಮುಸ್ಲಿಮರು ವಕ್ಫ್ ಮಂಡಳಿಯನ್ನು ಸ್ಥಾಪಿಸಿದರು.. ಬ್ರಿಟಿಷರ ಕಾಲದಲ್ಲೇ ವಕ್ಫ್ ಮಾಡಲಾದ ಸ್ವತ್ತನ್ನ ಉಳಿಸೋಕೆ ವಕ್ಫ್​ ಬೋರ್ಡ್, ವಕ್ಫ್ ಕಾಯ್ದೆಗಳು ಜಾರಿಗೆ ಬಂದ್ವು..

  • ಕರ್ನಾಟಕದಲ್ಲಿ ಎಷ್ಟು ವಕ್ಫ್ ಆಸ್ತಿ ಇದೆ?
    ದೇಶದಲ್ಲಿ 8 ಲಕ್ಷ ಎಕರೆ ಜಮೀನು ವಕ್ಫ್​ ಬೋರ್ಡ್ ಹೆಸ್ರಲ್ಲಿದೆ ಎಂದು ವಾದಿಸಲಾಗುತ್ತಿದೆ. ಅದ್ರಲ್ಲಿ ಕರ್ನಾಟಕದಲ್ಲೇ 1 ಲಕ್ಷದ 20 ಸಾವಿರ ಎಕರೆ ಭೂಮಿ ವಕ್ಫ್​​ಬೋರ್ಡ್ ಅಡಿಯಲ್ಲಿದೆ. ಆದ್ರೆ ಇಷ್ಟೂ ಜಮೀನು ವಕ್ಫ್​​ ಅಧೀನದಲ್ಲಿ ಇಲ್ಲ. ಯಾಕಂದ್ರೆ ಸಾಕಷ್ಟು ಆಸ್ತಿಗಳು ಒತ್ತುವರಿ ಆಗಿದೆ. ನೂರಾರು ವರ್ಷಗಳಿಂದ ಈ ಆಸ್ತಿ ಒತ್ತುವರಿ ಆಗಿದೆ. ಕರ್ನಾಟಕ ವಕ್ಫ್​ ಬೋರ್ಡ್ ಬಳಿ ಸದ್ಯಕ್ಕೆ ಇರೋದು 20 ಸಾವಿರ ಎಕರೆ ಮಾತ್ರ. ಉಳಿದ 1 ಲಕ್ಷ ಎಕರೆ ಒತ್ತುವರಿ ಆಗಿದೆ. ಯಾವ್ದೋ ಕಾಲದಿಂದ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈಗ ವಕ್ಫ್​ ಬೋರ್ಡ್ ದಾಖಲೆ ಕೇಳಿ ನೋಟಿಸ್ ಕೊಡ್ತಿದೆ.
  • ವಕ್ಫ್ ತಿದ್ದುಪಡಿಗೆ ಮುಂದಾದ ಕೇಂದ್ರ
    ವಕ್ಫ್​ ಬೋರ್ಡ್​ಗೆ ಮೂಗುದಾರ ಹಾಕೋಕೆ ಕೇಂದ್ರ ಸರ್ಕಾರ ಹೊಸ ಕಾಯ್ದೆ ಜಾರಿಗೆ ತರ್ತಿದೆ. ವಕ್ಫ್​ ಬೋರ್ಡ್​​ ಬೇಕಾಬಿಟ್ಟಿಯಾಗಿ ಆಸ್ತಿ ವಶಪಡಿಸಿಕೊಳ್ಳಬಾರದು ಎಂದು ವಕ್ಫ್​ ಕಾಯ್ದೆ ತಿದ್ದುಪಡಿ ಮಾಡಲು ಮುಂದಾಗಿದೆ. ಆದ್ರೆ ಮೋದಿ ಸರ್ಕಾರದ ಈ ನಿರ್ಧಾರಕ್ಕೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸ್ತಿದೆ.. ವಕ್ಫ್ ತಿದ್ದುಪಡಿ ಮಸೂದೆ ಜಾರಿ ಆಗಬಾರದು, ನಮ್ಮ ಪ್ರಾಣ ಬೇಕಾದ್ರೂ ಕೊಡ್ತೀವಿ ಅಂತ ವಕ್ಫ್​ ಬೋರ್ಡ್ ಹೇಳ್ತಿದೆ.
- Advertisement -

Latest Posts

Don't Miss