ಬೆಂಗಳೂರು ಕರಗ ಆಚರಿಸಲು ಕಮಿಷನ್ ನೀಡಬೇಕೆಂಬ ಆರೋಪ: ಸರ್ಕಾರದ ವಿರುದ್ಧ ಯತ್ನಾಳ್ ವಾಗ್ದಾಳಿ

Political News: ಪ್ರತೀ ವರ್ಷ ವಿಜೃಭಣೆಯಿಂದ ನಡೆಯುವ ಬೆಂಗಳೂರು ಕರಗ ಆಚರಣೆಗೂ ಕಮಿಷನ್ ದಂಧೆ ಅಡ್ಡ ಬಂದಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಆದಿಶಕ್ತಿ ದ್ರೌಪದಮ್ಮನ ಆರಾಧನೆಯಾಗಿರುವ ವಿಶ್ವವಿಖ್ಯಾತ ಬೆಂಗಳೂರು ಕರಗ ಆಚರಣೆಗೆ ಸರ್ಕಾರ ಕೊಡುವ ಅನುದಾನದಲ್ಲೂ ಕೆಲ ಅಧಿಕಾರಿಗಳು ಕಮೀಷನ್ ಕೇಳುತಿದ್ದಾರೆ ಎಂದು ಆಯೋಜಕರು ಆರೋಪಿಸಿದ್ದಾರೆ. ಲೈಟಿಂಗ್ ವ್ಯವಸ್ಥೆ, ಹೂವ ನೀಡುವ ವರ್ತಕರು ಸೇರಿದಂತೆ ಅನೇಕರಿಗೆ ಬಿಲ್ ಪಾವತಿಯಾಗಿಲ್ಲ. ಬೆಂಗಳೂರಿನ ಐತಿಹಾಸಿಕ ಕರಗವನ್ನು ಜವಾಬ್ದಾರಿಯಿಂದ, ಉತ್ತರದಾಯಿತ್ವದಿಂದ, ವಿಜೃಂಭಣೆಯಿಂದ ತಾಯಿ ದ್ರೌಪದಮ್ಮನ ಶಕ್ತ್ಯೋತ್ಸವವನ್ನು ವಹಿಸಬೇಕಾಗಿದ್ದ ಮುಜರಾಯಿ ಇಲಾಖೆಯೇ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾಡಿಗೆ ಯಾವುದೇ ಸಾಂಕ್ರಾಮಿಕ ಬರದಂತೆ, ರೈತರಿಗೆ, ವರ್ತಕರಿಗೆ, ಜಾನುವಾರಗಳಿಗೆ ಆರೋಗ್ಯ, ಸಮೃದ್ಧಿ ನೀಡುವ ಶಕ್ತಿ ದೇವತೆ ದ್ರೌಪದಮ್ಮನ ಕರಗಕ್ಕೆ ಅಪಚಾರ ಬಗೆಯುತ್ತಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಮೇಲೆ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಸರಿ ಸುಮಾರು 500 ವರ್ಷಗಳ ಇತಿಹಾಸವಿರುವ ಕರಗದ ಮೇಲ್ವಿಚಾರಣೆಯನ್ನು ಮುಜರಾಯಿ ಸಚಿವರ ನೇತೃತ್ವದ High Power Committee ಗೆ ನಡೆಸಿಕೊಡಬೇಕು. ಹಿಂದೂ ಧರ್ಮಗಳ ಆಚರಣೆಗಳು, ಉತ್ಸವಗಳು, ರಥೋತ್ಸವಗಳಿಗೂ ‘ಕೈ’ ಚಾಚುವ ಭ್ರಷ್ಟ ಅಧಿಕಾರಿಗಳ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

ಹೈ ಪವರ್ ಕಮಿಟಿ ಅತ್ಯಂತ ವಿಜೃಂಭಣೆಯಿಂದ, ಭಕ್ತಿ, ಭಾವನೆಯಿಂದ, ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಯಾರಿಗೂ ಅನ್ಯಾಯವಾಗದಂತೆ ಕರಗವನ್ನು ನಡೆಸಿಕೊಡಲಿ ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

About The Author