ಸಿದ್ದರಾಮಯ್ಯ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋ ಗೊಂದಲಗಳ ಮಧ್ಯೆಯೇ, ಉಪಮುಖ್ಯಮಂತ್ರಿ ವಿಚಾರ ಮುನ್ನೆಲೆಗೆ ಬಂದಿದೆ. ಇದೇ ವಿಚಾರವಾಗಿ ಮಾಜಿ ಸಚಿವ ಶ್ರೀರಾಮುಲು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪ್ರಿಯಾಂಕ್ ಖರ್ಗೆ ಡಿಸಿಎಂ ಆಗಲು ದೆಹಲಿ ಮಟ್ಟದಲ್ಲಿ ಪ್ಲಾನ್ ಮಾಡಲಾಗಿದೆಯಂತೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ತಂತ್ರ ರೂಪಿಸಲಾಗಿದೆಯಂತೆ. ಹೀಗಂತ ಶ್ರೀರಾಮುಲು ಬಾಂಬ್ ಸಿಡಿಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಬೇಕು. ಪ್ರಿಯಾಂಕ್ ಖರ್ಗೆ ಡಿಸಿಎಂ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಬಗ್ಗೆ ಆರೋಪ ಮಾಡಿದ್ದಾರೆ. ಭಾರತ ಮಾತಾಕಿ ಜೈ ಅನ್ನೋರ ಮೇಲೆ ಕೇಸ್ ಹಾಕುತ್ತಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಅನ್ನೋರನ್ನ ರಾಜ್ಯಸಭಾ ಸದಸ್ಯರನ್ನಾಗಿ ಮಾಡ್ತಾರೆ ಎಂದು ಶ್ರೀರಾಮುಲು ಗುಡುಗಿದ್ದಾರೆ.
ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಅವರ ವಿರುದ್ಧ ಯಾರೇ ಮಾತಾಡಿದ್ರೂ ಅವರನ್ನು ಜೈಲಿಗೆ ಹಾಕೋದು. ಅವರಿಗೆ ತೊಂದರೆ ಮಾಡೋದು. ಆರ್‌ಎಸ್‌ಎಸ್ ಜೊತೆ ಯಾರೇ ಹೋದ್ರೂ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ರಾಜ್ಯದ ಉಪಮುಖ್ಯಮಂತ್ರಿ ಆಗಬೇಕೆಂಬ ಕನಸು ಇಟ್ಟುಕೊಂಡು ಈ ರೀತಿ ಮಾಡುತ್ತಿದ್ದಾರೆ.
ಈಗಾಗಲೇ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಅಜೆಂಡಾ ಏನಂದ್ರೆ, ಅವರ ಮಗನನ್ನ ಡಿಸಿಎಂ ಮಾಡೋದು. ಅವರೆಲ್ಲರೂ ಪ್ಲಾನ್ಡ್ ಆಗಿ ಹೋಗುತ್ತಿದ್ದಾರೆಂದು ಶ್ರೀರಾಮುಲು ಆರೋಪಿಸಿದ್ದಾರೆ. ಇದೇ ವೇಳೆ ಸತೀಶ್ ಜಾರಕಿಹೊಳಿ ಸಿಎಂ ಆಗ್ತಾರೆ ಎಂಬ ಊಹಾಪೋಹಗಳಿಗೂ ರಾಮುಲು ಪ್ರತಿಕ್ರಿಯಿಸಿದ್ದು, ಸತೀಶ್ ಜಾರಕಿಹೊಳಿ ಸಿಎಂ ಆದ್ರೆ ವಾಲ್ಮಿಕಿ ಸಮುದಾಯಕ್ಕೆ ಬಲ ಬಂದಂತೆ ಆಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮುಲು ಹೇಳಿದ್ದಾರೆ.