www.karnatakatv.net: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕಾಶ್ಮೀರದ ಶ್ರೀನಗರಕ್ಕೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ.
ಕಣಿವೆ ಪ್ರದೇಶದಲ್ಲಿ ಬೆಳವಣಿಗೆಗಳ ಬಗ್ಗೆ ಪರಾಮರ್ಶೆ ನಡೆಸಲು 3ದಿನಗಳ ಪ್ರವಾಸಕ್ಕೆ ಕೇಂದ್ರ ಗೃಹ ಸಚಿವರು ಶ್ರೀನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಉಗ್ರರಿಂದ ಇತ್ತೀಚೆಗೆ ನಾಗರಿಕರ ಹತ್ಯೆ ಮತ್ತು ಹೆಚ್ಚಿನ ಉಪಟಳದ ಕಾರಣ ಭೇಟಿ ಕೈಗೊಳ್ಳುತ್ತಿದ್ದಾರೆ. 2019ರ ಆಗಸ್ಟ್ 5ರಂದು ಪೂರ್ವ ವಲಯ ರಾಜ್ಯಗಳನ್ನು ವಿಭಜನೆ ಮಾಡಿ ಸಂವಿಧಾನ ವಿಧಿ 370 ಮತ್ತು 35ಎ ತೆಗೆದುಹಾಕಿದ ನಂತರ ಅಮಿತ್ ಶಾ ಅವರ ಮೊದಲ ಜಮ್ಮು-ಕಾಶ್ಮೀರ ಭೇಟಿಯಾಗಿದ್ದು ತೀವ್ರ ಕುತೂಹಲ ಕೆರಳಿದೆ.
ಅಮಿತ್ ಶಾ ಅವರ ಭೇಟಿ ಸಂದರ್ಭದಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ. ಭದ್ರತೆ ವಿಚಾರವಾಗಿ ತಾತ್ಕಾಲಿಕ ಚೆಕ್ ಪಾಯಿಂಟ್ ಗಳನ್ನು ಮತ್ತು ಹೊಸ ಬಂಕರ್ ಗಳನ್ನು ಶ್ರೀನಗರ ಮತ್ತು ಕಣಿವೆ ಪ್ರದೇಶದ ಬೇರೆ ಕಡೆಗಳಲ್ಲಿ ರಚಿಸಲಾಗಿದೆ. 1990ರ ದಶಕದಲ್ಲಿ ಇಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾದ ಮೇಲೆ ಮಹಿಳಾ ಸಿಆರ್ ಪಿಎಫ್ ಸಿಬ್ಬಂದಿಯನ್ನು ಲಾಲ್ ಚೌಕ್ ನ ನಗರ ಕೇಂದ್ರದಲ್ಲಿ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ತೆಗೆದುಹಾಕಲಾಗಿದೆ. ಹಾಗೇ ಅಮಿತ್ ಶಾ ಅವರು ಉನ್ನತ ನಾಗರಿಕ ಮತ್ತು ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉನ್ನತ ಗೃಹ ಇಲಾಖೆಯ ಅಧಿಕಾರಿಗಳು ಶಾ ಅವರ ಜೊತೆ ಶ್ರೀನಗರಕ್ಕೆ ಭೇಟಿ ನೀಡುತ್ತಿದ್ದಾರೆ.