ಹಾಸನ ಜಿಲ್ಲೆಯ ಆಲೂರಿನ ಮನೆಯೊಂದ್ರಲ್ಲಿ ಸ್ಫೋಟ ಸಂಭವಿಸಿದ್ದು, ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. 40 ವರ್ಷದ ಸುದರ್ಶನ್ ಆಚಾರ್, 28 ವರ್ಷದ ಕಾವ್ಯ ಸ್ಥಿತಿ ಗಂಭೀರವಾಗಿದ್ದು, ಅದೃಷ್ಟವಷಾತ್ ಮಕ್ಕಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೆಪ್ಟೆಂಬರ್ 29ರ ರಾತ್ರಿ 8.15ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸುದರ್ಶನ್ ಮರಗೆಲಸ ಮಾಡ್ತಿದ್ದು, ಹಂದಿ ಬೇಟೆಗಾಗಿ ಬಳಸುತ್ತಿದ್ದ ಜಿಲೆಟಿನ್ ಕಡ್ಡಿಯನ್ನ ಸರಬರಾಜು ಮಾಡುತ್ತಿದ್ರು ಎನ್ನಲಾಗ್ತಿದೆ. ಜಿಲೆಟಿನ್ ಕಡ್ಡಿ ಸ್ಫೋಟಗೊಂಡು ದುರ್ಘಟನೆ ಸಂಭವಿಸಿದೆ. ಸ್ಫೋಟದ ತೀವ್ರತೆಗಾಗಿ ಮನೆಯ ಗೋಡೆಗಳು ಛಿದ್ರ ಛಿದ್ರವಾಗಿದ್ದು, ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ.
ಇಬ್ಬರು ಗಾಯಾಳುಗಳನ್ನು ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು, ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಮಂಗಳೂರಿನಿಂದ ಬಾಂಬ್ ನಿಷ್ಕ್ರೀಯ ದಳ ಕರೆಸಲಾಗಿದ್ದು, ಪರಿಶೀಲನೆ ಮಾಡ್ತಿದೆ. ಪೊಲೀಸರು ಬಿಗಿ ಭದ್ರತೆ ನೀಡಿದ್ದು, ಬಾಂಬ್ ನಿಷ್ಕ್ರಿಯ ದಳದಿಂದಲೂ ತಪಾಸಣೆ ನಡೀತಿದೆ.