ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದ ಘಟನೆಯೊಂದು, ಇಡೀ ನಾಗರಿಕ ಸಮಾಜವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಮಲಗುಂಡಿಯೊಳಗೆ ಕೂಲಿ ಕಾರ್ಮಿಕರನ್ನು ಇಳಿಸಿ ಸ್ವಚ್ಛಗೊಳಿಸಿ, ಬಳಿಕ ಅದೇ ಮಲವನ್ನು ಅವರ ತಲೆ ಮೇಲೆ ಹೊತ್ತು ಸಾಗಿಸುವಂತೆ ಮಾಡಿದ ಘಟನೆ ಸಂಭವಿಸಿದೆ.
ಕೂಸನೂರು ಗ್ರಾಮದ ಸುರೇಶ್ ಪೂಜಾರ ಮತ್ತು ಬಸವರಾಜ್ ಪೂಜಾರ ಎಂಬುವರ ಮನೆಗಳ ಮಲಗುಂಡಿಯನ್ನು ಸ್ವಚ್ಛಗೊಳಿಸಲು, ಹೀರೆಕೆರೂರು ತಾಲೂಕಿನಿಂದ ಇಬ್ಬರು ಕೂಲಿ ಕಾರ್ಮಿಕರನ್ನು ಕರೆಸಲಾಗಿತ್ತು. ಈ ಮಲಗುಂಡಿಯನ್ನು ಸುಮಾರು ಎಂಟು ವರ್ಷಗಳಿಂದ ಸ್ವಚ್ಛಗೊಳಿಸಿರಲಿಲ್ಲ ಎನ್ನಲಾಗಿದೆ. ದುರ್ವಾಸನೆ ನಡುವೆ ಕಾರ್ಮಿಕರನ್ನು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಗುಂಡಿಯೊಳಗೆ ಇಳಿಸಲಾಗಿದೆ.
ಮಲಗುಂಡಿಯಿಂದ ತೆಗೆದ ಮಲವನ್ನು ಬಕೆಟ್‌ಗಳಲ್ಲಿ ತುಂಬಿ, ಕಾರ್ಮಿಕರ ತಲೆ ಮೇಲೆ ಹೊತ್ತು ಸಾಗಿಸುವಂತೆ ಮಾಡಲಾಗಿದೆ. ಅಲ್ಲದೇ ಹೆಚ್ಚು ಕೂಲಿ ನೀಡುವ ಆಮಿಷವೊಡ್ಡಿ ಈ ಕೆಲಸಕ್ಕೆ ಕಾರ್ಮಿಕರನ್ನು ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ.
ಭಾರತದಲ್ಲಿ ಮಲಹೊರುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಜಾರಿಯಲ್ಲಿದ್ದು, ಇಂತಹ ಕೃತ್ಯವು ಗಂಭೀರ ಅಪರಾಧವಾಗಿದೆ. ಈ ಕಾಯ್ದೆಯ ಪ್ರಕಾರ, ಮಲಗುಂಡಿಗಳ ಸ್ವಚ್ಛತೆಗೆ ಯಂತ್ರೋಪಕರಣಗಳನ್ನು ಬಳಸಬೇಕಾಗಿದ್ದು, ಮಾನವರನ್ನು ನೇರವಾಗಿ ಬಳಸುವುದು ಸಂಪೂರ್ಣ ಅಪರಾಧ. ಆದರೂ ಹಾವೇರಿ ಜಿಲ್ಲೆಯ ಈ ಘಟನೆಯು ಕಾನೂನು ಕಾಗದದಲ್ಲಿ ಮಾತ್ರ ಉಳಿದಿದೆಯೇ ಎಂಬ ಪ್ರಶ್ನೆಯನ್ನು ಎಬ್ಬಿಸಿದೆ.
ಘಟನೆ ಬೆಳಕಿಗೆ ಬಂದ ನಂತರ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರೇಶ್ ಮತ್ತು ಬಸವರಾಜ್ ವಿರುದ್ಧ ಮ್ಯಾನುವೆಲ್ ಸ್ಕಾವೆಂಜರ್ಸ್ ಕಾಯ್ದೆ ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಇದಕ್ಕೂ ಮಿಗಿಲಾಗಿ, ಈ ಕೆಲಸಕ್ಕೆ ಬಳಸಲ್ಪಟ್ಟ ಕಾರ್ಮಿಕರ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಬಗ್ಗೆ ಚಿಂತನೆ ಅಗತ್ಯವಾಗಿದೆ. ಮಲಹೊರುವಂತಹ ಕೆಲಸವು ಕೇವಲ ಶಾರೀರಿಕ ಶ್ರಮವಲ್ಲ, ಅದು ವ್ಯಕ್ತಿಯ ಆತ್ಮಗೌರವವನ್ನು ಕುಸಿಯುವಂತೆ ಮಾಡುವ ಕ್ರೂರ ಪದ್ಧತಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




