ತುಮಕೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಕಾರ್ಯ, ಇನ್ನೂ ಟೇಕಾಫ್ ಆಗಿಲ್ಲ. 2026-2027ರ ವೇಳೆಗೆ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದೆ ಅನ್ನುವ ನಿರೀಕ್ಷೆ ಸುಳ್ಳಾಗಿದೆ. ವಸಂತ ನರಸಾಪುರ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಸೋರೆಕುಂಟೆಯಲ್ಲಿ, ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. 41 ಎಕರೆಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, 2024ರ ಡಿಸೆಂಬರ್ 2ರಂದು ಶಂಕುಸ್ಥಾಪನೆ ಮಾಡಿದ್ರು.
ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್‌ಗೆ ಭೂಮಿ ಮಂಜೂರಾತಿ ಆದೇಶ ಪತ್ರವನ್ನೂ ನೀಡಿದ್ದರು. ಆ ವೇಳೆ 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವನ್ನು, ಕೆಎಸ್‌ಸಿಎ ಮತ್ತು ಸರ್ಕಾರ ವ್ಯಕ್ತಪಡಿಸಿತ್ತು. ಆದರೆ ಶಂಕುಸ್ಥಾಪನೆ ಮುಗಿದು ವರ್ಷ ಸಮೀಪಿಸುತ್ತಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ಸ್ಟೇಡಿಯಂ ನಿರ್ಮಾಣ ಕನಸು, ಕನಸಾಗಿಯೇ ಉಳಿಯಲಿದೆ.
ಸೆಪ್ಟೆಂಬರ್ ಅಂತ್ಯದಲ್ಲಿ ಬಿಸಿಸಿಐ ಚುನಾವಣೆ ನಡೆಯಲಿದ್ದು, ಬಳಿಕ ಕೆಎಸ್‌ಸಿಎ ಚುನಾವಣೆ ನಡೆಯಲಿದೆ. ಆ ಬಳಿಕವಷ್ಟೇ ಸ್ಟೇಡಿಯಂ ಕೆಲಸವನ್ನು ಕೈಗೆತ್ತಿಕೊಳ್ಳವ ಸಾಧ್ಯತೆ ಇದೆ. ಸದ್ಯ, ಕಾಪೌಂಡ್ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಬಿಸಿಸಿಐ ಮತ್ತು ಕೆಎಸ್‌ಸಿಎ ಚುನಾವಣೆ ಬಳಿಕ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿ ಆರಂಭವಾಗಲಿದೆ ಎನ್ನಲಾಗ್ತಿದೆ.