‘ಅಶ್ವಮೇಧ ಕುದುರೆಯನ್ನ ಕಟ್ಟಿ ಹಾಕ್ತಿನಿ’ ಎಂದಿದ್ದ ಕತ್ತಿಗೆ ದೊಡ್ಡ ಮುಖಭಂಗವಾಗಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಓಟದಲ್ಲಿ ಬ್ಯಾಂಕ್ ನ ಅಧ್ಯಕ್ಷರಾಗಿ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಾಸಕ ರಾಜು ಕಾಗೆ ಆಯ್ಕೆಯಾಗಿದ್ದು, ಈ ಮೂಲಕ ಜಾರಕಿಹೊಳಿ ಬ್ರದರ್ಸ್ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಲಿಂಗಾಯತ ಸಮುದಾಯದ ನಾಯಕರಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ.
ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಈ ಬಾರಿ ಜಾರಕಿಹೊಳಿ ಬ್ರದರ್ಸ್ ಬಣದ ಅಭ್ಯರ್ಥಿಗಳು ಸ್ಪಷ್ಟ ಬಹುಮತವನ್ನು ಗಳಿಸಿದ್ದರು. ಅದರಂತೆ ಲಿಂಗಾಯತ ಸಮುದಾಯದ ಅಣ್ಣಾ ಸಾಹೇಬ್ ಜೊಲ್ಲೆರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಸತೀಶ್ ಮತ್ತು ಬಾಲಚಂದ್ರ ಜಾರಕಿಹೊಳಿ ತಮ್ಮ ಮಾತನ್ನು ಕಾಪಾಡಿದ್ದಾರೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ವಿವಿಧ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದ ನಾಯಕರು ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಸಹ ಅದೇ ಸಮುದಾಯದ ನಾಯಕರಿಗೆ ನೀಡುವ ಮೂಲಕ, ಆ ಸಮುದಾಯದ ವಿಶ್ವಾಸ ಮತ್ತು ಬೆಂಬಲವನ್ನು ಮತ್ತಷ್ಟು ಬಲಪಡಿಸುವ ರಾಜಕೀಯ ತಂತ್ರವನ್ನು ಜಾರಕಿಹೊಳಿ ಬ್ರದರ್ಸ್ ಅನುಸರಿಸಿದ್ದಾರೆ.
ಈ ಬಾರಿ ಡಿಸಿಸಿ ಬ್ಯಾಂಕ್ ಆಡಳಿತದ ಹಿಡಿತಕ್ಕಾಗಿ ಜಾರಕಿಹೊಳಿ ಬ್ರದರ್ಸ್ ಬಣ ಮತ್ತು ಲಕ್ಷ್ಮಣ ಸವದಿ–ರಮೇಶ್ ಕತ್ತಿ ಬಣಗಳ ನಡುವೆ ಭಾರಿ ಪೈಪೋಟಿ ನಡೆಯಿತು. ಅಂತಿಮವಾಗಿ ಜಾರಕಿಹೊಳಿ ಬ್ರದರ್ಸ್ ಬೆಂಬಲಿತ ನಿರ್ದೇಶಕರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನವೂ ಅವರ ಬಣದ ಅಭ್ಯರ್ಥಿ ಅಣ್ಣಾ ಸಾಹೇಬ್ ಜೊಲ್ಲೆ ಪಾಲಾಗಿದೆ.
ಡಿಸಿಸಿ ಬ್ಯಾಂಕ್‌ನಲ್ಲಿ ಪಕ್ಷ ರಾಜಕೀಯಕ್ಕಿಂತ ಬಣ ರಾಜಕೀಯವೇ ಮುಖ್ಯವಾಗಿದ್ದು, ಒಂದೇ ಪಕ್ಷದ ನಾಯಕರೂ ಪರಸ್ಪರ ಎದುರಾಳಿಗಳಾಗಿರುವುದು ವಿಶೇಷ. ನಿಪ್ಪಾಣಿ ಕ್ಷೇತ್ರದ ನಿರ್ದೇಶಕರಾಗಿ ಅಣ್ಣಾ ಸಾಹೇಬ್ ಜೊಲ್ಲೆ ಆಯ್ಕೆಯಾಗಲು ಜಾರಕಿಹೊಳಿ ಬ್ರದರ್ಸ್ ಬೆಂಬಲಿಸಿದ್ದರು. ಆಸಕ್ತಿಯ ಸಂಗತಿ ಎಂದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಇದೇ ಅಣ್ಣಾ ಸಾಹೇಬ್ ಜೊಲ್ಲೆ ವಿರುದ್ಧ ಸತೀಶ್ ಜಾರಕಿಹೊಳಿ ತಮ್ಮ ಮಗಳು ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಸ್ಪರ್ಧೆಗೆ ಇಳಿಸಿ ಗೆಲುವು ಸಾಧಿಸಿದ್ದರು.
ಆದರೆ ಇದೀಗ ಅದೇ ರಾಜಕೀಯ ಎದುರಾಳಿಯನ್ನು ತಮ್ಮ ಬಣಕ್ಕೆ ಸೆಳೆಯುವ ಮೂಲಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ನೀಡಿರುವ ಸತೀಶ್ ಜಾರಕಿಹೊಳಿ, ಜಿಲ್ಲೆಯಲ್ಲಿ ರಮೇಶ್ ಕತ್ತಿ ಮತ್ತು ಲಕ್ಷ್ಮಣ ಸವದಿ ಬಣದ ಪ್ರಭಾವವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವು ಜಿಲ್ಲೆಯ ರಾಜಕೀಯದ ತೂಕಮಾಪನದ ಕೇಂದ್ರಬಿಂದುವಾಗಿದ್ದು, ಈ ತೀರ್ಮಾನ ಜಾರಕಿಹೊಳಿ ಬ್ರದರ್ಸ್‌ರ ರಾಜಕೀಯ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ವರದಿ : ಲಾವಣ್ಯ ಅನಿಗೋಳ

