Monday, November 17, 2025

Latest Posts

ಅನ್ನಭಾಗ್ಯ ಅಕ್ಕಿಗೆ ಫಾರಿನ್‌ ಭಾಗ್ಯ

- Advertisement -

ಫಾರಿನ್‌ ಟೂರ್‌ಗೆ ಹೋಗೋದು ಸಾಮಾನ್ಯ ಜನ್ರಿಗೆ ಕನಸಿನ ಮಾತು. ಆದರೆ ರಾಜ್ಯದ ಅನ್ನಭಾಗ್ಯ ಅಕ್ಕಿಗೆ ಫಾರಿನ್‌ಗೆ ಹೋಗೋ ಭಾಗ್ಯ ಸಿಕ್ಕಿದೆ. ಫಾರಿನ್‌ಗೆ ಹೋಗಲು ಸಜ್ಜಾಗಿದ್ದ ಕೋಟ್ಯಾಂತರ ಮೌಲ್ಯದ ಅನ್ನಭಾಗ್ಯ ಅಕ್ಕಿಯನ್ನು ರಾಜ್ಯದಲ್ಲಿ ಸೀಜ್‌ ಮಾಡಲಾಗಿದೆ.

ರಾಜ್ಯ ಸರ್ಕಾರ ವಿತರಿಸುತ್ತಿರುವ ಪಡಿತರ ಅಕ್ಕಿಯನ್ನು ಪಾಲಿಶ್‌ ಮಾಡಿ, ಸಿಂಗಾಪುರ, ಫ್ರಾನ್ಸ್‌, ದುಬೈ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡಲಾಗ್ತಿತ್ತು. ಆಹಾರ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದಿದ್ದು, 6 ಕೋಟಿ ಮೌಲ್ಯದ ಅಕ್ಕಿಯನ್ನ ವಶಕ್ಕೆ ಪಡೆಯಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಕೊಪ್ಪಳ ಜಿಲ್ಲೆಯ ಗಂಗಾವತಿ, ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ, ಇತ್ತೀಚೆಗಷ್ಟೇ ಅನ್ನಭಾಗ್ಯದ ಅಕ್ಕಿಯ ಕಳ್ಳಸಾಗಣೆ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ಯಾದಗಿರಿಯಲ್ಲೂ ಬೃಹತ್‌ ಹಗರಣ ಬೆಳಕಿಗೆ ಬಂದಿದೆ. ಗುರುಮಠಕಲ್‌ ಹೊರವಲಯದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಇಂಡಸ್ಟ್ರೀಸ್‌ ಮೇಲೆ ನಡೆಸಿದ ದಾಳಿಯಲ್ಲಿ, 6000 ಟನ್‌ನಷ್ಟು ಪಡಿತರ ಅಕ್ಕಿ ಪತ್ತೆಯಾಗಿದೆ.

ಜಿಲ್ಲೆಯ ವಿವಿಧೆಡೆಯಿಂದ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಇಲ್ಲಿಗೆ ತಂದು, ಅತ್ಯಾಧುನಿಕ ಯಂತ್ರಗಳಲ್ಲಿ ಹಾಕಿ, ಪಾಲಿಶ್‌ ಮಾಡಲಾಗುತ್ತಿತ್ತು. ಹೀಗೆ ಪಾಲಿಶ್‌ ಮಾಡಿದ ಅಕ್ಕಿಯನ್ನು 25 ಮತ್ತು 10 ಕೆಜಿಯ ಬ್ಯಾಗ್‌ಗಳಲ್ಲಿ, ಡೈನಾಸ್ಟಿ, ವೋಲ್ಗಾ ಎಎಎ, ದಾರಾ ಡಬ್ಬಲ್‌ ಸ್ಟಾರ್‌ ಮುಂತಾದ ಬ್ರ್ಯಾಂಡ್‌ಗಳಲ್ಲಿ ಸಿಂಗಾಪುರ, ಫ್ರಾನ್ಸ್‌, ಗಲ್ಫ್‌ ರಾಷ್ಟ್ರಗಳಿಗೆ ಸಾಗಿಸಲು ಸಂಚು ನಡೆದಿತ್ತು.

ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್‌ಗಳ ಹೆಸರಲ್ಲಿ ನಕಲು ಮಾಡಿ, ಮೂರ್ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗ್ತಿತ್ತು. ಆಯಾ ರಾಷ್ಟ್ರಗಳ ಭಾಷೆಗಳಲ್ಲಿ ಪ್ರಿಂಟ್‌ ಮಾಡಲಾಗ್ತಿತ್ತು. ಸಿಂಗಾಪುರದಲ್ಲಿ 25 ಕೆಜಿ ತೂಕದ ಚೀಲಕ್ಕೆ 8ರಿಂದ 10 ಸಾವಿರ ರೂಪಾಯಿ, ದುಬೈ ಸೇರಿ ಗಲ್ಫ್‌ ರಾಷ್ಟ್ರಗಳಲ್ಲಿ 10 ಕೆಜಿ ತೂಕದ ಚೀಲಕ್ಕೆ, 1,500ರಿಂದ 2,000 ರೂ.ಗಳಿಗೆ ಮಾರಾಟ ಮಾಡಲಾಗ್ತಿತ್ತಂತೆ.

ಇನ್ನು, ಗೋಗಿ, ಶಹಾಪುರ, ಸುರಪುರ ಸೇರಿ ಹಲವು ತಾಲೂಕುಗಳ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿ ಮಾರಾಟ ದಂಧೆ ನಡೆಯುತ್ತಿದೆಯಂತೆ. ಕೋಟ್ಯಂತರ ರೂಪಾಯಿಗಳ ಅವ್ಯವಹಾರದ ಹಣ, ಚುನಾವಣೆಗಳಲ್ಲೂ ಕೆಲವು ರಾಜಕೀಯ ಪಕ್ಷಗಳಿಗೆ ಫಂಡಿಂಗ್‌ ಆಗುತ್ತಿದೆ ಅಂತಾ ಹೇಳಲಾಗ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡುವಂತೆ, ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಆಗ್ರಹಿಸಿದ್ದಾರೆ.

- Advertisement -

Latest Posts

Don't Miss