Sunday, September 8, 2024

Latest Posts

B. Nagendra: ಬಿ.ನಾಗೇಂದ್ರ ವಿರುದ್ಧ ಗಂಭೀರ ಆರೋಪ!

- Advertisement -

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ. ಅಕ್ರಮ ವರ್ಗಾವಣೆ ಹಗರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಈಗ ಇನ್ನೊಂದು ಆರೋಪ ಕೇಳಿಬಂದಿದೆ. ಹೈದರಾಬಾದ್ ಮೂಲದ ಆರೋಪಿಯೊಬ್ಬನಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ತನ್ನ ಹೈದರಾಬಾದ್ ಮನೆಗೆ ಬಂದು ನಾಗೇಂದ್ರ ಕಡೆಯವರು ಹಗರಣದಲ್ಲಿ ಸಚಿವರ ಹೆಸರು ಹೊರಬರದಂತೆ ನೋಡಿಕೊಳ್ಳಬೇಕೆಂದು ಬೆದರಿಸಿದ್ದರು ಎಂದು ವಾಲ್ಮಿಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಆರೋಪಿ ಸತ್ಯ ನಾರಾಯಣ ವರ್ಮಾ ಕೋರ್ಟ್‌ ಮುಂದೆ ಹೇಳಿಕೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯನಾರಾಯಣ ವರ್ಮಾ ಅವರನ್ನು ಎಸ್‌ಐಟಿ ಪೊಲೀಸರು ಬುಧವಾರ ಬೆಂಗಳೂರಿನ 3ನೇ ಎಸಿಎಂಎಂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ವೇಳೆ ಆರೋಪಿ ಸತ್ಯನಾರಾಯಣ ವರ್ಮಾ ಅವರು ಎಸ್‌ಐಟಿ ಪೊಲೀಸರು ತಮ್ಮನ್ನು ಬಂಧಿಸುವುದಕ್ಕೂ ಮುನ್ನ ನಾಗೇಂದ್ರ ಅವರ ಸಹಚರರು ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲ, ನ್ಯಾಯಾಲಯದಿಂದ ಹೊರಗೆ ಕರೆದೊಯ್ಯುತ್ತಿದ್ದ ವೇಳೆ ನಾಗೇಂದ್ರ ಅವರ ಆಪ್ತ ನೆಕ್ಕುಂಡಿ ನಾಗರಾಜ್‌ ತಮ್ಮ ಮೇಲೆ ಹಲ್ಲೆ ನಡೆಸುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಿದರು.

ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ನಗರದ 3ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯವು, ಆರೋಪಿ ಸತ್ಯನಾರಾಯಣ ವರ್ಮಾ ಅವರಿಗೆ ಬಿ.ನಾಗೇಂದ್ರ ಅವರಿಂದ ಜೀವ ಬೆದರಿಕೆ ಇರುವ ಆರೋಪ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಹಲಸೂರು ಗೇಟ್ ಠಾಣೆ ಪೊಲೀಸರಿಗೆ ನಿರ್ದೇಶನ ನೀಡಿದೆ.
ವಾಲ್ಮೀಕಿ ಹಗರಣದ ಕೋಟ್ಯಾಂತರ ಹಣ ವರ್ಗಾವಣೆಯಾಗುವುದಕ್ಕೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ ಆರೋಪ ಹೊತ್ತಿರುವ ಸತ್ಯನಾರಾಯಣ ವರ್ಮಾ, ಹೈದರಾಬಾದ್ ಬಂಜಾರ ಹಿಲ್ಸ್‌ನಲ್ಲಿ ರತ್ನಾಕರ ಬ್ಯಾಂಕಿನ ಶಾಖೆಯಲ್ಲಿ ನಕಲಿ ಕಂಪನಿಗಳ ಹೆಸರಿನಲ್ಲಿ ಖಾತೆ ಮಾಡಿಸಿದ್ದ. ಅವುಗಳಿಗೆ ಕರ್ನಾಟಕ ಮಹರ್ಷಿ ವಾಲ್ಮೀಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿನಿಗಮದಿಂದ ಅನಧಿಕೃತವಾಗಿ ಕೋಟ್ಯಂತರ ಹಣ ವರ್ಗಾವಣೆಯಾಗಿತ್ತು. ನಂತರ ಆ ಹಣವನ್ನು ವರ್ಮಾ ವಿವಿಧ ಉದ್ದೇಶಗಳಿಗೆ ಬಳಸಿ ಲಾಭ ಮಾಡಿಕೊಂಡಿದ್ದಾನೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ವರ್ಮಾನ ಹೈದರಾಬಾದ್ ಮನೆ ಮೇಲೆ ಸಿಐಡಿ ಪೊಲೀಸರು ದಾಳಿ ನಡೆಸಿ, 8.21 ಕೋಟಿ ನಗದು ಮತ್ತು ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಜಪ್ತಿ ಮಾಡಿದ್ದರು. ನಂತರ ಹೈದರಬಾದ್‌ನಿಂದ ಆರೋಪಿಯನ್ನು ಕರೆತಂದು, ನಗರದ 3ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಆತನನ್ನು ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ನೀಡಿತ್ತು. ಪೊಲೀಸ್ ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆರೋಪಿಯನ್ನು ಮತ್ತೆ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು.

ಈ ವೇಳೆ ಆರೋಪಿ ಸತ್ಯನಾರಾಯಣ್ ಮಾಜಿ ಸಚಿವ ನಾಗೇಂದ್ರ ಮತ್ತು ಅವರ ಸಹಚರರ ವಿರುದ್ಧ ಜೀವ ಬೆದರಿಕೆಯ ಗಂಭೀರ ಆರೋಪ ಮಾಡಿದ್ದು ಪೋಲೀಸ್ ತನಿಖೆಯ ಬಳಿಕ ಈ ಆರೋಪದ ಬಗ್ಗೆ ಸತ್ಯಾಸತ್ಯತೆಗಳು ಹೊರಬರಲಿದೆ. ಸದ್ಯ 187ಕೋಟಿ ರೂ. ಅಕ್ರಮ ವರ್ಗಾವಣೆಯ ಆರೋಪ ಎದುರಿಸುತ್ತಿರುವ ಬಿ.ನಾಗೇಂದ್ರ ಅವರಿಗೆ ಇನ್ನೊಂದು ಆರೋಪ ಮತ್ತಷ್ಟು ತಲೆನೋವು ತಂದಿದೆ.

- Advertisement -

Latest Posts

Don't Miss