ಬಾಲಿವುಡ್ ಗೆ ಮತ್ತೊಂದು ಆಘಾತಕರ ಸುದ್ದಿ ಎದುರಾಗಿದೆ. ಹಿರಿಯ ನಟ ಧರ್ಮೇಂದ್ರ ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಚಿಂತಾಜನಕವಾಗಿದೆ. ಈ ನಡುವೆ ಜನಪ್ರಿಯ ನಟ ಗೋವಿಂದ ಕೂಡಾ ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಮಂಗಳವಾರ ನವೆಂಬರ್ 11ರ ರಾತ್ರಿ ತಮ್ಮ ಮುಂಬೈ ನಿವಾಸದಲ್ಲಿ ಗೋವಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಜುಹುವಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋವಿಂದ ಅವರನ್ನು ಆಸ್ಪತ್ರೆಗೆ ತುರ್ತು ವಿಭಾಗಕ್ಕೆ ಕರೆದೊಯ್ಯಲಾಗಿದೆ. ಪ್ರಸ್ತುತ ಅವರಿಗೆ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ವೈದ್ಯಕೀಯ ಪರೀಕ್ಷೆಗಳು ನಡೆದಿದ್ದು, ಪ್ರಜ್ಞೆ ತಪ್ಪಲು ಕಾರಣ ಇನ್ನೂ ಬಹಿರಂಗವಾಗಿಲ್ಲ. ವರದಿಗಳು ಬಂದ ಬಳಿಕ ಅವರ ಆರೋಗ್ಯ ಸ್ಥಿತಿ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಗೋವಿಂದ ಅವರು ನವೆಂಬರ್ 10 ರಂದು ಹಿರಿಯ ನಟ ಧರ್ಮೇಂದ್ರರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿದ್ದರು. ಧರ್ಮೇಂದ್ರರನ್ನು ಭೇಟಿಯಾಗಿ ಹಿಂದಿರುಗಿದ ಒಂದೇ ದಿನದಲ್ಲಿ ಗೋವಿಂದ ಸ್ವತಃ ಅಸ್ವಸ್ಥರಾಗಿದ್ದಾರೆ ಎನ್ನುವುದು ಬಾಲಿವುಡ್ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಧರ್ಮೇಂದ್ರ ಅವರ ಆರೋಗ್ಯ ವಿಚಾರಿಸಲು ಸಲ್ಮಾನ್ ಖಾನ್, ಶಾರುಖ್ ಖಾನ್, ಆರ್ಯನ್ ಖಾನ್ ಸೇರಿದಂತೆ ಹಲವಾರು ತಾರೆಗಳು ಭೇಟಿ ನೀಡಿದ್ದರು.
ಗೋವಿಂದ ಅವರಿಗೆ ಆಸ್ಪತ್ರೆ ಪ್ರವೇಶ ಹೊಸದಿಲ್ಲ. ಕಳೆದ ವರ್ಷ ಅಕ್ಟೋಬರ್ನಲ್ಲಿ ಗೋವಿಂದ ಅವರು ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿತ್ತು. ತಮ್ಮ ರಿವಾಲ್ವರ್ನಿಂದ ಮಿಸ್ ಫೈಯರ್ ಆದ ಬುಲೆಟ್ ಅವರ ಕಾಲಿಗೆ ಹೊಡೆದಿತ್ತು. ಇದರಿಂದ ಅವರು ಆಸ್ಪತ್ರೆ ಸೇರಬೇಕಾಯಿತು. ಸದ್ಯ ಗೋವಿಂದ ಹಾಗೂ ಅವರ ಪತ್ನಿ ಸುನಿತಾ ಅಹುಜಾ ಸಂಬಂಧ ಹದಗೆಟ್ಟಿದೆ. ಇವರು ಶೀಘ್ರವೇ ವಿಚ್ಛೇದನ ಪಡೆಯುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಈ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ.
ವರದಿ : ಲಾವಣ್ಯ ಅನಿಗೋಳ

