Tuesday, July 15, 2025

Latest Posts

ನಿಮ್ಮ ಕಣ್ಣೆದುರಿಗೇ ಇರುವ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿಯವರ ಮುಖಕ್ಕೆ ಹಿಡಿದು ಉತ್ತರಿಸಿ: ಸಿಎಂ

- Advertisement -

Political News: ಇಂದು ಸಿಎಂ ಸಿದ್ದರಾಮಯ್ಯ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ನಮ್ಮದು ಅಭಿವೃದ್ಧಿ ಪರವಾದ ಸರ್ಕಾರ ಎನ್ನುವುದಕ್ಕೆ ಇಂದು ಒಂದೇ ದಿನ ಇಂಡಿಯಲ್ಲಿ 4,559 ಕೋಟಿ ರೂಪಾಯಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ನಾನು ನೆರವೇರಿಸಿದ ಈ ಕ್ಷಣವೇ ಸಾಕ್ಷಿ. 4,157 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, 401 ಕೋಟಿ ರೂಪಾಯಿ ಮೊತ್ತದ ಕಾಮಗಾರಿಯನ್ನು ಉದ್ಘಾಟನೆ ಮಾಡಿದ್ದೇನೆ. ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ. ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರದ ಸಾಧನೆ ಮತ್ತು ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಸಾರ್ವಜನಿಕ‌ವಾಗಿ ದಾಖಲೆ ಸಮೇತ ಚರ್ಚೆ ನಡೆಸೋಣ. ಸಾಧನೆಗಳನ್ನು ಹೋಲಿಸಿ ಜನರೇ ತೀರ್ಮಾನಿಸಲಿ ಎಂದಿದ್ದಾರೆ.

ವಿಜಯಪುರ ಜಿಲ್ಲೆ ಮೊದಲು ಹೇಗಿತ್ತು? ಈಗ ಹೇಗಿದೆ? ನಮ್ಮ ಸರ್ಕಾರದಲ್ಲಿ ಮತ್ತು ಹಿಂದಿನ ನಮ್ಮ ಪಕ್ಷದ ಸರ್ಕಾರಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನು ಕೈಯಲ್ಲಿ ಹಿಡಿದು ನೋಡಿ. ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಈ ಮಟ್ಟಿಗೆ ಪ್ರಗತಿ ಕಂಡು, ಬರದ ನಾಡಾಗಿದ್ದ ವಿಜಯಪುರವನ್ನು ಹಸಿರಿನ ತವರಾಗಿ ಮಾಡಿದ್ದು ನಾವು. ಹಿಂದೆ ಬರಗಾಲ ಬಂದಾಗ ಜನ ನಿಂಬೆ ಗಿಡ ಕಿತ್ತು ಹಾಕುತ್ತಿದ್ದರು. ಅದೇ ದಿನ‌ ನಾನು ಇಂಡಿಗೆ ಬಂದಿದ್ದೆ, ನಿಂಬೆ ಬೆಳೆಗಾರರಿಗೆ ಭರವಸೆಯನ್ನೂ ನೀಡಿದ್ದೆ. ಇಂದು ನಿಂಬೆ ಅಭಿವೃದ್ಧಿ ಮಂಡಳಿಯ ಲಾಂಛನ ಬಿಡುಗಡೆ ಮಾಡಿ ನುಡಿದಂತೆ ನಡೆಯುವ ನಮ್ಮ ಪಕ್ಷದ ಪರಂಪರೆಯನ್ನು ಮುಂದುವರೆಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್ ಇಬ್ಬರೂ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಅಪಪ್ರಚಾರ ಮಾಡಿ ಜನರಿಂದಲೇ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ನಾವು ಇವರ ಅಪಪ್ರಚಾರಕ್ಕೆ ಜನರ ಅಭಿವೃದ್ಧಿ ಮತ್ತು ಜನ ಕಲ್ಯಾಣ ಕಾರ್ಯಕ್ರಮಗಳ ಮೂಲಕವೇ ಉತ್ತರ ಕೊಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ತಿರುಗೇಟು ನೀಡಿದ್ದಾರೆ.

ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುವುದು, 1.23 ಕೋಟಿ ಕುಟುಂಬಗಳು ಗೃಹಲಕ್ಷ್ಮಿ ಹಣ ಪಡೆದಿರುವುದು, 1.64 ಕೋಟಿ ಮನೆಗಳು ಉಚಿತವಾಗಿ 200 ಯೂನಿಟ್ ವಿದ್ಯುತ್ ಪಡೆಯುತ್ತಿರುವುದು, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಮೂಲಕ ಕೋಟಿ ಕೋಟಿ ಕನ್ನಡಿಗರ ಬದುಕಿಗೆ ನೆರವಾಗಿರುವುದು ಅಭಿವೃದ್ಧಿ ಅಲ್ಲವೇ? ಗ್ಯಾರಂಟಿಗಳಲ್ಲದೆ 83 ಸಾವಿರ ಕೋಟಿ ರೂಪಾಯಿ ಹಣ ಅಭಿವೃದ್ಧಿಗೆ ತೆಗೆದಿಟ್ಟುರುವುದು ನಮ್ಮ ಅಭಿವೃದ್ಧಿಪರವಾದ ಆಡಳಿತಕ್ಕೆ ಸ್ಪಷ್ಟ ನಿದರ್ಶನ. ಆದ್ದರಿಂದ ಬಿಜೆಪಿ-ಜೆಡಿಎಸ್ ನ ಸುಳ್ಳು ಆರೋಪಗಳನ್ನು ನಂಬಬೇಡಿ. ನಿಮ್ಮ ಕಣ್ಣೆದುರಿಗೇ ಇರುವ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿಯವರ ಮುಖಕ್ಕೆ ಹಿಡಿದು ಉತ್ತರಿಸಿ ಎಂದು ಮನವಿ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸ್ಥಳೀಯ ಶಾಸಕರಾದ ಯಶವಂತರಾಯಗೌಡ ಪಾಟೀಲ್ ಅವರು ಸರ್ಕಾರದಿಂದ ಹಣ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವುದು ಹೇಗೆ ಎನ್ನುವುದರಲ್ಲಿ ಬಹಳ ಪ್ರಾಮಾಣಿಕರು ಮತ್ತು ಚಾಣಾಕ್ಷರು. ನಮ್ಮದು ಸರ್ವರ ಅಭಿವೃದ್ಧಿಗೆ ಬದ್ಧವಾಗಿರುವ ಸರ್ಕಾರ. ಇಡೀ ರಾಜ್ಯದ ಅಭಿವೃದ್ಧಿಯ ಚಿತ್ರಣ ಈಗ ಬದಲಾಗುತ್ತಿದೆ. ಇದೇ ನಮ್ಮ ಸರ್ಕಾರದ ಸಾಧನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

Latest Posts

Don't Miss