Political News: ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ರೂ, ಅದರ ಬಗ್ಗೆ ಗಮನ ಹರಿಸದೇ, ರಾಜ್ಯ ಸರ್ಕಾರ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಒಂದು ಪ್ಯಾರಸಿಟಮಾಲ್ ಗೂ ಕೊರತೆಯಿರುವಾಗ, ರಾಜ್ಯ ಸರ್ಕಾರದ ಆತ್ಮಸಾಕ್ಷಿ ವಿದೇಶ ಪ್ರವಾಸಕ್ಕೆ ಹೊರಟಿದೆ ರಾಜ್ಯದ ಬಡ ಜನರು ಪಾಪ, ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ಪ್ಯಾರಾಸಿಟಮಾಲ್ ಮಾತ್ರೆಗೂ ಪರದಾಡುತ್ತಿದ್ದಾರೆ. ಔಷಧಿ ಕೊರತೆಯಿಂದ ಬಡ ರೋಗಿಗಳಿಗೆ ಚಿಕಿತ್ಸೆಗೂ ತತ್ವರವಾಗಿದೆ. ಆರೋಗ್ಯ ಇಲಾಖೆಯೇ ಐಸಿಯುನಲ್ಲಿರುವ ಪರಿಸ್ಥಿತಿ ಇದೆ. ಖಜಾನೆ ಖಾಲಿ ಎಂಬ ಸಬೂಬಿನಡಿ ಬಡವರ ಆರೋಗ್ಯದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ, ಆಡಳಿತ ಪಕ್ಷದ ಶಾಸಕರು ವಿದೇಶಿ ಪ್ರವಾಸದ ‘ಮೋಜು-ಮಸ್ತಿ’ಗೆ ಸಜ್ಜಾಗುತ್ತಿರುವುದು ಒಂದೆಡೆ, ಇದನ್ನು ಸಮರ್ಥಿಸುವ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಇನ್ನೊಂದೆಡೆ! ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ನೈತಿಕ ಪತನಕ್ಕೆ ಸಾಕ್ಷಿಯಾಗಿದೆ ಎಂದು ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಶಾಸಕರಿಗೂ ರಜೆ ಕಳೆಯುವ ಹಕ್ಕಿದೆ” ಎಂದು ಸಮರ್ಥಿಸಿಕೊಳ್ಳುವ ಆರೋಗ್ಯ ಸಚಿವರಿಗೆ ಜನಸಾಮಾನ್ಯರ ನೋವು ಕಾಣುತ್ತಿಲ್ಲವೇ? ಖಜಾನೆ ಖಾಲಿಯೆಂದು ಅಭಿವೃದ್ಧಿ ನಿಲ್ಲಿಸಿರುವ ಕಾಂಗ್ರೆಸ್ ಸರ್ಕಾರ, ತನ್ನ ಶಾಸಕರ ವೈಭೋಗಕ್ಕೆ ಹಣ ಸುರಿಯುತ್ತಿದೆ.
ಇದು ಕೇವಲ ಬೌದ್ಧಿಕ, ನೈತಿಕ ದಿವಾಳಿತನವಲ್ಲ, ಇದು ಸಂವೇದನಾ ರಹಿತ ರಾಜ್ಯ ಸರ್ಕಾರ ಜನಾದೇಶಕ್ಕೆ ಎಸಗಿದ ದ್ರೋಹ. ಜನರ ಹಿತ ಕಾಯಲಾಗದ ಈ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿರುವ ನೈತಿಕ ಹಕ್ಕಿಲ್ಲ. ಮಾನ್ಯ ಆರೋಗ್ಯ ಸಚಿವರೇ, ನಿಮ್ಮ ಆತ್ಮಸಾಕ್ಷಿಯನ್ನು ಕೂಡ ವಿದೇಶಕ್ಕೆ ಕಳಿಸಿದ್ದೀರಾ? ಮೊದಲು ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಕೊಡಿ, ನಂತರ ನಿಮ್ಮ ಶಾಸಕರ ವಿದೇಶಿ ಮೋಜುಗಳನ್ನು ಸಮರ್ಥಿಸಿ! ಜನರು ಸಂಕಷ್ಟ ಎದುರಿಸುತ್ತಿರುವಾಗ, ಜನಪ್ರತಿನಿಧಿಗಳು ಮೋಜು ಮಾಡುವುದು ಸರಿಯೇ ಎಂದು ಜನ ಕೇಳುತ್ತಿದ್ದಾರೆ. ಆತ್ಮಸಾಕ್ಷಿ ಇದ್ದರೆ ಉತ್ತರಿಸಿ! ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.




