Wednesday, November 13, 2024

Latest Posts

Martin : ತಮ್ಮ ನಿರ್ದೇಶನದ ಮಾರ್ಟಿನ್ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿದ ಎ.ಪಿ. ಅರ್ಜುನ್!

- Advertisement -

ನಿರ್ದೇಶಕ ಎ.ಪಿ. ಅರ್ಜುನ್, ತಮ್ಮ ನಿರ್ದೇಶನದ, ಧ್ರುವ ಸರ್ಜಾ ನಟಿಸಿರುವ ‘ಮಾರ್ಟಿನ್’ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಿನಿಮಾ ಬಿಡುಗಡೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಶುರುವಾಗಿ ಸುಮಾರು ಐದಾರು ವರ್ಷಗಳೇ ಕಳೆದಿದೆ. ವರ್ಷಗಳ ಬಳಿಕ ಈಗಾಗಲೇ ಅಕ್ಟೋಬರ್ 11ರಂದು ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಇನ್ನೇನು ಸಿನಿಮಾ ಬಿಡುಗಡೆಗೆ ಭರ್ಜರಿಯಾಗಿಯೇ ಪ್ರಚಾರ ಕೆಲಸ ಶುರುಮಾಡಿ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ ಅಂದುಕೊಳ್ಳುತ್ತಿರುವಂತೆಯೇ ಮಾರ್ಟಿನ್ ಈಗ ವಿವಾದಕ್ಕೆ ಸಿಲುಕಿದೆ. ‘ಮಾರ್ಟಿನ್’ ವಿವಾದ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದು, ಆ ಸಿನಿಮಾದ ನಿರ್ದೇಶಕ ಎ.ಪಿ. ಅರ್ಜುನ್ ಹೈಕೋರ್ಟ್ ನಲ್ಲಿ ದೂರು ದಾಖಲಿಸಿದ್ದಾರೆ.

‘ಮಾರ್ಟಿನ್’ ಸಿನಿಮಾ ನಿರ್ಮಾಪಕ ಉದಯ್ ಮೆಹ್ತಾ ಹಾಗೂ ನಿರ್ದೇಶಕ ಎ.ಪಿ. ಅರ್ಜುನ್ ಮಧ್ಯೆ ಕಳೆದ ಒಂದೆರಡು ವರ್ಷಗಳಿಂದಲೂ ಮುನಿಸಿತ್ತು. ನಿರ್ಮಾಪಕ ಉದಯ್ ಮೆಹ್ತಾ ಸಿನಿಮಾದ ಬಜೆಟ್, ಹಣ ದುರ್ಬಳಕೆ ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿನಿಮಾದ ವಿಎಫ್​ಎಕ್ಸ್​ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಸಂಸ್ಥೆ ವಿರುದ್ಧ ವಂಚನೆ ಪ್ರಕರಣವನ್ನು ಸಹ ಉದಯ್ ಮೆಹ್ತಾ ದಾಖಲಿಸಿದ್ದಾರೆ. ಉದಯ್ ಮೆಹ್ತಾ ನೀಡಿದ್ದ ದೂರಿನಲ್ಲಿ ನಿರ್ದೇಶಕ ಎ.ಪಿ. ಅರ್ಜುನ್ ಹೆಸರು ಸಹ ಇತ್ತು.

 

ವಿವಾದದ ಬಳಿಕ ಇತ್ತೀಚೆಗೆ ನಡೆದ ಪ್ರಚಾರ ಕಾರ್ಯಕ್ರಮಗಳಲ್ಲಿ ಕಂಡು ಬಂದ ಸಿನಿಮಾ ಪೋಸ್ಟರ್ ಗಳಲ್ಲಿ ಸಿನಿಮಾದ ನಿರ್ದೇಶಕ ಎ.ಪಿ. ಅರ್ಜುನ್ ಅವರ ಹೆಸರು ನಾಪತ್ತೆಯಾಗಿತ್ತು. ನಿರ್ಮಾಪಕರ ಉದಯ್ ಮೆಹ್ತಾ ಅವರು ನಿರ್ದೇಶಕರ ಹೆಸರು ಬಿಟ್ಟು ಸಿನಿಮಾ ಪ್ರಚಾರ ನಡೆಸುತ್ತಿದ್ದರು. ಈ ಸಂಬಂಧ ಕೋರ್ಟ್ ಮೆಟ್ಟಿಲೇರಿರುವ ಎ.ಪಿ. ಅರ್ಜುನ್, ‘ಸಿನಿಮಾ ನಿರ್ದೇಶಕನಾಗಿದ್ದರೂ ಸಹ ನನ್ನ ಹೆಸರು ಕೈ ಬಿಟ್ಟು ಪ್ರಚಾರ ಮಾಡಲಾಗುತ್ತಿದೆ.ಸಿನಿಮಾದ ಒಪ್ಪಂದವನ್ನು ನಿರ್ಮಾಪಕರು ಪಾಲಿಸುತ್ತಿಲ್ಲ.ನನ್ನ ಹೆಸರು ಇಲ್ಲದೆ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು’ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸದ್ಯ ಅರ್ಜಿ ವಿಚಾರಣೆ ನಡೆಯಬೇಕಿದೆ.

‘ಮಾರ್ಟಿನ್’ ಸಿನಿಮಾದ ಸಿಜಿ ಹಾಗೂ ವಿಎಫ್​ಎಕ್ಸ್​ ಕೆಲಸಗಳನ್ನು ಮಾಡಿಕೊಡಲು ಡಿಜಿಟಲ್ ಟೆರೆನ್ ಎಂಬ ಸಂಸ್ಥೆಯೊಂದಿಗೆ ನಿರ್ಮಾಪಕ ಉದಯ್ ಮೆಹ್ತಾ ಒಪ್ಪಂದ ಮಾಡಿಕೊಂಡಿದ್ದರು. ನಿರ್ದೇಶಕ ಅರ್ಜುನ್ ಶಿಫಾರಸ್ಸಿನಂತೆ ಈ ಸಂಸ್ಥೆಗೆ ಕೆಲಸ ವಹಿಸಲಾಗಿತ್ತು. ಇದಕ್ಕಾಗಿ ನಿರ್ಮಾಪಕರು 2.5 ಕೋಟಿ ರೂಪಾಯಿ ಹಣ ನೀಡಿದ್ದರು. ಆದರೆ ಈ ಸಂಸ್ಥೆ ವಿಎಫ್​ಎಕ್ಸ್ ಮತ್ತು ಸಿಜಿ ಕಾರ್ಯವನ್ನು ಮಾಡಿಕೊಟ್ಟಿರಲಿಲ್ಲ. ಮಾಡಿದ ಕೆಲಸವೂ ತೃಪ್ತಿದಾಯಕವಾಗಿರಲಿಲ್ಲ ಎಂದು ನಿರ್ಮಾಪಕರು ಆರೋಪ ಮಾಡಿದ್ದರು. ಬಳಿಕ ಸಂಸ್ಥೆಯ ಸುರೇಂಧ್ರ ರೆಡ್ಡಿ ಮತ್ತು ಸತ್ಯಾ ರೆಡ್ಡಿ ವಿರುದ್ಧವೂ ನಿರ್ಮಾಪಕ ಉದಯ್ ಮೆಹ್ತಾ ದೂರು ದಾಖಲಿಸಿದ್ದರು. ಆ ಬಳಿಕ ಹೇಳಿಕೆ ನೀಡಿದ್ದ ಡಿಜಿಟಲ್ ಟೆರೇನ್ ಸಂಸ್ಥೆಯ ಸುರೇಂಧ್ರ ರೆಡ್ಡಿ, ನಿರ್ಮಾಪಕ ಉದಯ್ ಮೆಹ್ತಾ ನೀಡಿರುವ 2.50 ಕೋಟಿ ಹಣದಲ್ಲಿ ಎಪಿ ಅರ್ಜುನ್ 50 ಲಕ್ಷ ರೂಪಾಯಿ ಕಮೀಷನ್ ಪಡೆದಿದ್ದಾರೆ ಎಂದು ಹೇಳಿದ್ದರು. ಇದು ಉದಯ್ ಮೆಹ್ತಾ ಹಾಗೂ ಎಪಿ ಅರ್ಜುನ್ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಎ.ಪಿ. ಅರ್ಜುನ್ ಹೆಸರು ಕೈಬಿಟ್ಟು ಪ್ರಚಾರ ಮಾಡಲು ಉದಯ್ ಮೆಹ್ತಾ ಮುಂದಾಗಿದ್ದರು. ಇದರಿಂದ ಬೇಸರಗೊಂಡು ಎಪಿ ಅರ್ಜುನ್ ಕೋರ್ಟ್ ಮೆಟ್ಟಿಲು ಏರಿದ್ದಾರೆ.
ಸದ್ಯ ಕೋರ್ಟ್ ಮೆಟ್ಟಿಲೇರಿರುವ ಈ ಪ್ರಕರಣ ಮುಂದೇನಾಗುತ್ತೋ ಕಾದು ನೋಡಬೇಕು. ಹಾಗೆ ನೋಡಿದರೆ, ಧ್ರುವ ಸರ್ಜಾ ಅವರ ಮೊದಲ ಸಿನಿಮಾ ಅದ್ಧೂರಿ ನಿರ್ದೇಶಿಸಿದ್ದ ಅವರು, ನಂತರ ಬಿಗ್ ಬಜೆಟ್ ಸಿನಿಮಾ ಮಾಡುವ ಆಲೋಚನೆಯಲ್ಲಿದ್ದರು. ಇದೀಗ ಮಾರ್ಟಿನ್ ಸಿದ್ಧಗೊಂಡು ಬಿಡುಗಡೆಗೆ ದಿನ ಎಣಿಸುತ್ತಿದೆ. ಹೀಗಿರುವಾಗಲೇ ಸಮಸ್ಯೆ ಎದುರಾಗಿದೆ.

- Advertisement -

Latest Posts

Don't Miss