Hubli News: ಹುಬ್ಬಳ್ಳಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜೂಜುಕೋರರು ಹಾಗೂ ರೌಡಿಶೀಟರ್ ಗಳ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಜೂಜಾಟ ಆಡುತ್ತಿದ್ದ ರೌಡಿಗಳ ಗುಂಪು ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದು, ಈಗಾಗಲೇ 19 ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.
ಇಲ್ಲಿನ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ನಗರದ ಹೊರವಲಯದಲ್ಲಿ ಜೂಜಾಟ ಅಡ್ಡೆಯ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರ ಮೇಲೆಯೇ ಜೂಜುಕೋರರು ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಘಟನೆ ಮಂಟೂರ ರಸ್ತೆಯ ಅರಳಿಕಟ್ಟಿ ಕಾಲೋನಿಯಲ್ಲಿ ನಡೆದಿದೆ ಎಂದರು.
ದೀಪಾವಳಿ ಹಬ್ಬದ ನಿಮಿತ್ತವಾಗಿ ಹು-ಧಾ ಪೋಲಿಸ್ ಕಮಿಷನ್ನರೇಟ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಇಸ್ಪೀಟ್ ದಂಧೆ ನಡೆಸುವವರು ಹಾಗೂ ರೌಡಿಶೀಟರ್ ಗಳ ನಿಗಾವಹಿಸುವಂತೆ ಸೂಚನೆ ನೀಡಲಾಗಿತ್ತು.
ಈ ನಿಟ್ಟಿನಲ್ಲಿ ಸೋಮವಾರ ಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ರಫಿಕ್ ತಹಶಿಲ್ದಾರ ಹಾಗೂ ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಇಲ್ಲಿನ ಬುದ್ದ ವಿಹಾರದ ಬಳಿಯ ಖಾಲಿ ಜಾಗದಲ್ಲಿ ಇಸ್ಪೀಟ್ ಆಡುತ್ತಿದ್ದ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ದಾಳಿ ಮಾಡಿ ರೌಡಿಶೀಟರ್ ದಾವೂದ್ ಸೇರಿ 19 ಜನರ ಬಂಧನ ಮಾಡಲಾಗಿದೆ. ಬಂಧಿತರಿಂದ 17 ಮೊಬೈಲ್ ಮತ್ತು 61,530 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಇನ್ನು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ಸೈಂಟಿಸ್ಟ್ ಮಂಜ್ಯಾ ಬಂಡಾರಿ ಮತ್ತು ಜಿಲಾನಿ ಅಲಿಯಾಸ್ ಜೀಲು ದಾವಲ್ ಸಾಬ್ ನದಾಫ್ ಎಸ್ಕೇಪ್ ಆದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ವಿವರಿಸಿದರು.
ಬಂಧಿತ ದಾವೂದ್ ಮೇಲೆ ಕೊಲೆ ಮತ್ತು ಕೊಲೆ ಯತ್ನ ಸೇರಿ ಒಟ್ಟು 15 ಪ್ರಕರಣಗಳಿವೆ. ಈತ ಹಣ ವಸೂಲಿ, ಭಯ ಹುಟ್ಟಿಸುವ ಮಾಹಿತಿ ಇತ್ತು. ಈತನದ್ದೆ ಒಂದು ಗ್ಯಾಂಗ್ ಇದೆ. ನಾವು ಮೂರು ತಿಂಗಳಿಂದ ಈತನ ಮೇಲೆ ನಿಗಾ ಇಡಲಾಗಿತ್ತು. ಪ್ರಕರಣದಲ್ಲಿ ಇನ್ನೊಬ್ಬ ರೌಡಿ ಶೀಟರ್ ಸೈಂಟಿಸ್ಟ್ ಮಂಜ ತಪ್ಪಿಸಿಕೊಂಡಿದ್ದಾನೆ. ಪೊಲೀಸರ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ. ನಮ್ಮ ಸಿಬ್ಬಂದಿ ತಳ್ಳಿ ಕೆಲವರು ಎಸ್ಕೇಪ್ ಆಗಿದ್ದಾರೆ. ಅವರನ್ನು ಪೊಲೀಸರು ಆದಷ್ಟು ಬೇಗ ಅರೆಸ್ಟ್ ಮಾಡ್ತಾರೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದಾರೆ.
ಹಬ್ಬದ ಹಿನ್ನಲೆಯಲ್ಲಿ ಜೂಜಾಟಕ್ಕೆ ಅವಕಾಶ ಇಲ್ಲ: ದೀಪಾವಳಿ ಹಿನ್ನಲೆ ಹಬ್ಬ ಜೂಜಾಟದ ಮೇಲೆ ದಾಳಿ ಮಾಡಲ್ಲ ಅನ್ನೋ ಕಲ್ಪನೆಯಲ್ಲಿ ಇದಾರೆ. ನಾವು ಜೂಜಾಟಕ್ಕೆ ಅವಕಾಶ ಕೊಡಲ್ಲ. ದೀಪಾವಳಿ ಹಬ್ಬವಿದೆ ಎಂದು ಜೂಜಾಟ ಆಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.