Thursday, October 30, 2025

Latest Posts

ಕಾಂಗ್ರೆಸ್ ನ ಎಲ್ಲ ಗೊಂದಲಗಳಿಗೂ ತೆರೆ ಎಳೆಯೋಕೆ ಮುಹೂರ್ತ ಫಿಕ್ಸ್‌!

- Advertisement -

ರಾಜ್ಯ ಕಾಂಗ್ರೆಸ್‌ನಲ್ಲಿ ಭಾರಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಪಕ್ಷದ ಹೈಕಮಾಂಡ್‌ ನವೆಂಬರ್‌ನಲ್ಲಿ ನಿರ್ಣಾಯಕ ತೀರ್ಮಾನ ಕೈಗೊಳ್ಳಲು ಸಿದ್ಧವಾಗಿದ್ದು, ಸಂಪುಟ ಪುನಾರಚನೆ ಅಥವಾ ನಾಯಕತ್ವ ಬದಲಾವಣೆ ಕುರಿತ ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆ ಉಂಟಾಗಿದೆ. ಬಿಹಾರ ಚುನಾವಣಾ ಫಲಿತಾಂಶ ಹೊರಬಂದ ತಕ್ಷಣ ಈ ನಿಟ್ಟಿನಲ್ಲಿ ಚಟುವಟಿಕೆಗಳು ಗಟ್ಟಿಯಾಗಿ ಪ್ರಾರಂಭವಾಗಲಿವೆ. ನವೆಂಬರ್‌ 26ರೊಳಗೆ ಅಂತಿಮ ತೀರ್ಮಾನ ಹೊರಬೀಳುವ ನಿರೀಕ್ಷೆ ಪಕ್ಷ ವಲಯದಲ್ಲಿ ವ್ಯಕ್ತವಾಗಿದೆ.

ಕಳೆದ ಕೆಲ ತಿಂಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಪ್ರಶ್ನೆ ಕುರಿತು ಸದ್ದು ಮುಂದುವರಿದಿದೆ. ಈಗ ಹೈಕಮಾಂಡ್‌ ನವೆಂಬರ್‌ ಕ್ರಾಂತಿಯಂತೆಯೇ ಕರೆಯಲ್ಪಡುತ್ತಿರುವ ನಿರ್ಣಾಯಕ ಬೆಳವಣಿಗೆಗೆ ತಯಾರಾಗಿದೆ. ಉನ್ನತ ಮೂಲಗಳ ಪ್ರಕಾರ, ಹೈಕಮಾಂಡ್‌ ಎಲ್ಲ ಅಸ್ಪಷ್ಟತೆಗೂ ತೆರೆ ಎಳೆಯಲು ನವೆಂಬರ್‌ ಅಂತ್ಯದೊಳಗೆ ನಿರ್ಧಾರ ಕೈಗೊಳ್ಳಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣಾವಧಿ ಸರ್ಕಾರವನ್ನು ನಡೆಸುವ ಅಪೇಕ್ಷೆ ವ್ಯಕ್ತಪಡಿಸಿದ್ದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೂ ಸಿಎಂ ಸ್ಥಾನವನ್ನು ಎದುರು ನೋಡುತ್ತಿದ್ದಾರೆ. ಸಿಎಂ ಹೇಳಿದ ಮೇಲೆ ಮುಗಿಯಿತು. ನಾವು ಹೇಳಿದಂತೆ ಕೇಳುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದ್ದರೂ, ಅವರ ನಾಯಕತ್ವದ ಆಸೆ ಎಲ್ಲರಿಗೂ ಗೊತ್ತಿದೆ.

ಇಬ್ಬರ ಬೆಂಬಲಿಗರೂ ಕಳೆದ ಕೆಲವು ತಿಂಗಳಿಂದ ತಮ್ಮ ನಾಯಕರ ಪರದಲ್ಲಿ ವಕಾಲತ್ತು ವಹಿಸುತ್ತಿದ್ದಾರೆ. ಈ ರಾಜಕೀಯ ಕಸರತ್ತು ಇದೀಗ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದೆ. ಕಾಂಗ್ರೆಸ್‌ನ ಅಘೋಷಿತ ಸಂವಿಧಾನದ ಪ್ರಕಾರ, ನಾಯಕತ್ವ ತೀರ್ಮಾನದಲ್ಲಿ ಹೈಕಮಾಂಡ್‌ ಮಾತೇ ಅಂತಿಮ.
ಹಾಗೆ ಹೈಕಮಾಂಡ್‌ ಅಂಗಳದಲ್ಲಿ ಸಿದ್ದರಾಮಯ್ಯ ಅವರಿಗೆ ರಾಹುಲ್‌ ಗಾಂಧಿ ಅವರದ್ದೇ ಶಕ್ತಿ.

ಡಿ.ಕೆ. ಶಿವಕುಮಾರ್‌ ಅವರಿಗೆ ಸೋನಿಯಾ ಗಾಂಧಿ ಆಶೀರ್ವಾದವಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಡಿಕೆಶಿ ಪರವಿದ್ದಾರೆ ಎಂಬ ಚರ್ಚೆ ಪಾರ್ಟಿಯೊಳಗೆ ಚುರುಕುಗೊಂಡಿದೆ. ಇದರಿಂದ ನಾಯಕತ್ವದ ಭವಿಷ್ಯ ಇದೀಗ ರಾಹುಲ್‌ ಗಾಂಧಿಯ ನಿರ್ಧಾರಕ್ಕೆ ನಿಂತಿದೆ. ಅವರ ಅಭಿಪ್ರಾಯವೇ ಸಿದ್ದರಾಮಯ್ಯ ಮುಂದುವರಿಕೆಗೆ ಮುದ್ರೆ ಬೀಳಿಸುತ್ತದೆಯೋ ಅಥವಾ ಡಿ.ಕೆ.ಶಿವಕುಮಾರ್‌ ಪ್ರಮೋಷನ್‌ಗೆ ದಾರಿ ಮಾಡಿಕೊಡುತ್ತದೆಯೋ ಎಂಬ ಕುತೂಹಲ ಹೆಚ್ಚಾಗಿದೆ.

ಪಕ್ಷದ ಉನ್ನತ ಮೂಲಗಳ ಪ್ರಕಾರ, ಬೆಳಗಾವಿ ಅಧಿವೇಶನಕ್ಕೂ ಮುನ್ನ ರಾಜ್ಯ ಕಾಂಗ್ರೆಸ್‌ನ ಒಳಗೊಂದಲಕ್ಕೆ ಅಂತ್ಯ ಕಾಣಿಸಲು ಹೈಕಮಾಂಡ್‌ ಬಯಸುತ್ತಿದೆ. ಅದಕ್ಕಾಗಿ ನವೆಂಬರ್‌ 26ರಂದು ಮುಹೂರ್ತ ನಿಗದಿ ಮಾಡುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಹೈಕಮಾಂಡ್‌ ತೀರ್ಮಾನದಿಂದ ಸಿದ್ದರಾಮಯ್ಯ–ಡಿಕೆಶಿ ಪೈಪೋಟಿಗೆ ಅಂತ್ಯವಾಗುತ್ತದೆಯೋ ಅಥವಾ ಹೊಸ ಅಧ್ಯಾಯ ಆರಂಭವಾಗುತ್ತದೆಯೋ ಎಂಬುದನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss