ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ ಮೈಸೂರಿನ ನಂಜನಗೂಡಿನಲ್ಲಿ ಗಂಡ–ಹೆಂಡತಿ ಜಗಳ ಕೊಲೆ ಯತ್ನದ ಹಂತಕ್ಕೆ ತಲುಪಿದ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಸಂಗೀತಾ ಎಂಬ ಮಹಿಳೆ ತನ್ನ ಗಂಡ ರಾಜೇಂದ್ರನನ್ನು ಕೊಲ್ಲಲು ಪ್ಲ್ಯಾನ್ ರೂಪಿಸಿದ್ದಾಳೆ. ಆದರೆ ಆ ಪ್ಲ್ಯಾನ್ ಉಲ್ಟಾ ಹೊಡೆದು ಗಂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಂಜನಗೂಡಿನ ನಿವಾಸಿ ರಾಜೇಂದ್ರ ಮತ್ತು ಪತ್ನಿ ಸಂಗೀತಾ ನಡುವೆ ಕಳೆದ ಕೆಲವು ತಿಂಗಳಿಂದ ಗೃಹಕಲಹಗಳು ನಡೆಯುತ್ತಿದ್ವು. ದಿನದಿಂದ ದಿನಕ್ಕೆ ಜಗಳಗಳು ಹೆಚ್ಚಾದ ಪರಿಣಾಮ, ಸಂಗೀತಾ ತನ್ನ ಗಂಡನನ್ನು ಕೊಲೆ ಮಾಡಲು ನಿರ್ಧರಿಸಿದ್ದಾಳೆ. ಈ ಕೆಲಸಕ್ಕೆ ಆಕೆ ತನ್ನ ಸಹೋದರ ಸಂಜಯ್ ಮತ್ತು ಇನ್ನಿಬ್ಬರನ್ನು ಸೇರಿಸಿಕೊಂಡಿದ್ದಾಳೆ.
ಅಕ್ಟೋಬರ್ 25ರಂದು ಬೆಳಗ್ಗೆ ರಾಜೇಂದ್ರ ಸ್ಕೂಟರ್‌ನಲ್ಲಿ ಹೊರಟಾಗ, ಸಂಜಯ್ ಮತ್ತು ಅವನ ಗೆಳೆಯರು ಬೈಕ್‌ನಲ್ಲಿ ಹಿಂಬಾಲಿಸಿದ್ದಾರೆ. ನಂತರ ಒಂಟಿ ರಸ್ತೆಯಲ್ಲಿ ರಾಜೇಂದ್ರನ ಸ್ಕೂಟರ್ ತಡೆದು, ದರೋಡೆಯ ನಾಟಕವಾಡಿ ಹಲ್ಲೆ ಮಾಡಿದ್ದಾರೆ. ಚಿನ್ನ ಕಸಿಯುವಂತೆ ನಟಿಸಿ, ರಾಜೇಂದ್ರನ ಮೇಲೆ ಚಾಕುಗಳಿಂದ ಅಟ್ಯಾಕ್ ಮಾಡಿದ್ದಾರೆ. ಆದರೆ ರಾಜೇಂದ್ರ ಕೂಗಾಡುತ್ತಿದ್ದಂತೆಯೇ ಇನ್ನೋಂದು ಕಾರು ಹತ್ತಿರ ಬಂದಿದೆ. ಕಾರು ನೋಡಿದ ಆರೋಪಿಗಳು ಆತಂಕಗೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ರಾಜೇಂದ್ರ ತಕ್ಷಣ ನಂಜನಗೂಡು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಸಾಮಾನ್ಯ ದರೋಡೆ ಎಂದು ಭಾವಿಸಿದ ಪೊಲೀಸರು, ವಿಚಾರಣೆ ಮುಂದುವರಿಸಿದಾಗ ಅಚ್ಚರಿಯ ಮಾಹಿತಿ ಸಿಕ್ಕಿದೆ. ಈ ಕೊಲೆ ಯತ್ನದ ಹಿಂದೆ ರಾಜೇಂದ್ರನ ಪತ್ನಿ ಸಂಗೀತಾ ಇದ್ದಾಳೆ ಎಂಬುದು ಬಹಿರಂಗವಾಗಿದೆ.
ಪೊಲೀಸರು ಸಂಗೀತಾ, ಆಕೆಯ ಸಹೋದರ ಸಂಜಯ್, ವಿಘ್ನೇಶ್ ಹಾಗೂ ಒಬ್ಬ ಅಪ್ರಾಪ್ತ ಬಾಲಕನನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆಯಲ್ಲಿ ಸಂಗೀತಾ ತನ್ನ ಗಂಡನ ಕೊಲೆ ಯತ್ನ ಮಾಡಿದುದನ್ನು ಒಪ್ಪಿಕೊಂಡಿದ್ದಾಳೆ. ಕೌಟುಂಬಿಕ ಕಲಹದಿಂದ ಹುಟ್ಟಿದ ಈ ಕ್ರೂರ ಪ್ಲ್ಯಾನ್ ನಂಜನಗೂಡಿನಲ್ಲಿ ಈಗ ಚರ್ಚೆಯ ವಿಷಯವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

