ನಾಗೇಂದ್ರ ರಾಜೀನಾಮೆಗೆ ಬಿಗಿಪಟ್ಟು! ಅಧಿವೇಶನ ನಡೆಯಲು ಬಿಡಲ್ಲ: ಆರ್.ಅಶೋಕ್ ಖಡಕ್ ಎಚ್ಚರಿಕೆ!

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ ಆರೋಪಗಳನ್ನು ಎದುರಿಸುತ್ತಿರುವ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಮರು ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಾಗೇಂದ್ರ ಅವರು ಸಚಿವರಾಗಿರುವವರೆಗೂ ವಿಧಾನಸಭೆ ಅಧಿವೇಶನ ಸುಗಮವಾಗಿ ನಡೆಯಲು ಅವಕಾಶ ನೀಡುವುದಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್‌.ಅಶೋಕ, ನಾಗೇಂದ್ರ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡಲೇ ಪಡೆಯಬೇಕು ಎಂದು ಆಗ್ರಹಿಸಿದರು. ಸದನದಲ್ಲಿ ಪ್ರತಿಯೊಂದು ವಿಚಾರಕ್ಕೂ ಮುಖ್ಯಮಂತ್ರಿಯೇ ಉತ್ತರ ನೀಡುವುದಾದರೆ ಸಚಿವರು ಏಕೆ ಬೇಕು ಎಂದು ಪ್ರಶ್ನಿಸಿದ ಅವರು, ಜನರ ತೆರಿಗೆ ಹಣದಿಂದ ಸಚಿವರಿಗೆ ಕಾರು, ಮನೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ. ಇದು ಚಕ್ರಾಧಿಪತ್ಯವಲ್ಲ. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಸಚಿವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.

ನಾಗೇಂದ್ರ ಅವರ ರಾಜೀನಾಮೆ ಪಡೆಯುವವರೆಗೂ ಅಧಿವೇಶನದ ಒಳಗೆ ಹಾಗೂ ಹೊರಗೆ ಬಿಜೆಪಿ ಹೋರಾಟ ನಡೆಸಲಿದೆ. ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾಧಿಕಾರಿ ಕಚೇರಿಗಳ ಎದುರು ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ಹಿಂದೆ ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಏಕೆ ತೆಗೆದುಹಾಕಲಾಗಿತ್ತು ಮತ್ತು ಇದೀಗ ಮತ್ತೆ ಏಕೆ ಸಂಪುಟಕ್ಕೆ ಸೇರ್ಪಡೆ ಮಾಡಲಾಗಿದೆ ಎಂಬುದಕ್ಕೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅಶೋಕ ಒತ್ತಾಯಿಸಿದರು. ನಾಗೇಂದ್ರ ಅವರು ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದು, ಕೋರ್ಟ್‌ ವಿಚಾರಣೆಗಳಲ್ಲಿ ಭಾಗವಹಿಸಬೇಕಾದ ಪರಿಸ್ಥಿತಿ ಇದೆ. ಸಿಬಿಐ, ಲೋಕಾಯುಕ್ತ, ಎಸ್‌ಐಟಿ ಹಾಗೂ ಸಿಐಡಿ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳಲ್ಲಿ ಪ್ರಕರಣಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು. ಇಂತಹ ಸಂದರ್ಭದಲ್ಲಿ ಅವರು ವಿಧಾನಸೌಧಕ್ಕೆ ಯಾವಾಗ ಬರುತ್ತಾರೆ ಮತ್ತು ಇಲಾಖೆಯ ಕೆಲಸಗಳನ್ನು ಯಾವಾಗ ನಿರ್ವಹಿಸುತ್ತಾರೆ ಎಂದು ಪ್ರಶ್ನಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ದೊಡ್ಡ ಮೊತ್ತದ ಅಕ್ರಮ ನಡೆದಿದೆ ಎಂಬ ಆರೋಪವಿದ್ದು, ಈ ಪ್ರಕರಣದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಹಣ ದುರುಪಯೋಗವಾಗಿದೆ ಎಂದು ಅಶೋಕ ಆರೋಪಿಸಿದರು. ಇಂತಹ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಸಚಿವ ಸಂಪುಟದಲ್ಲಿ ಮುಂದುವರಿಸಿದರೆ ಇಡೀ ಸಚಿವ ಸಂಪುಟವೇ ಕಳಂಕಿತವಾಗುತ್ತದೆ ಎಂದು ಹೇಳಿದರು.

ಸದನದ ಚರ್ಚೆಗೆ ಹಲವು ವಿಷಯ

ಮುಂಬರುವ ಅಧಿವೇಶನದಲ್ಲಿ ಬಿಡದಿ ಟೌನ್‌ಶಿಪ್‌, ಕೆಪಿಎಸ್‌ಸಿ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಚರ್ಚಿಸಬೇಕಿದೆ. ಆದರೆ ಸರ್ಕಾರ ಮೊದಲು ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು. ಆ ಬಳಿಕವೇ ಸದನದ ಕಲಾಪ ಸುಗಮವಾಗಿ ನಡೆಯಲು ಅವಕಾಶ ನೀಡಲಾಗುವುದು ಎಂದು ಅಶೋಕ ಹೇಳಿದರು.

ವಿಧಾನಪರಿಷತ್‌ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯದ ಬದಲಿಗೆ ಅವರ ಕಚೇರಿಗೆ ತೆರಳಿ ಒತ್ತಡ ಹೇರಿ ರಾಜೀನಾಮೆ ಪಡೆಯಲಾಗಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್‌ ಸರ್ಕಾರ ಪ್ರಜಾಪ್ರಭುತ್ವದ ನಿಯಮಗಳನ್ನು ಕಡೆಗಣಿಸುತ್ತಿದೆ ಎಂದು ಟೀಕಿಸಿದರು.

‘ಸ್ವಚ್ಛ ಬೆಂಗಳೂರು’ ಹೆಸರಿನಲ್ಲಿ ಹೊಸ ತೆರಿಗೆ: ಆರೋಪ

‘ಸ್ವಚ್ಛ ಬೆಂಗಳೂರು’ ಹೆಸರಿನಲ್ಲಿ ಕಾಂಗ್ರೆಸ್‌ ಸರ್ಕಾರ ಜನರ ಮೇಲೆ ಹೊಸ ತೆರಿಗೆಗಳ ಹೊರೆ ಹಾಕುತ್ತಿದೆ ಎಂದು ಆರ್‌.ಅಶೋಕ ಆರೋಪಿಸಿದರು. ಈಗಾಗಲೇ ಜನರು ಪಾವತಿಸುತ್ತಿರುವ ತೆರಿಗೆಗಳಲ್ಲೇ ಕಸ ನಿರ್ವಹಣೆಯ ವೆಚ್ಚವೂ ಸೇರಿದೆ. ಆದರೂ ಹೊಸದಾಗಿ ವಿವಿಧ ರೀತಿಯ ಶುಲ್ಕಗಳನ್ನು ವಿಧಿಸಲಾಗುತ್ತಿದೆ ಎಂದು ದೂರಿದರು.

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕಸದ ಸಮಸ್ಯೆ ಇನ್ನೂ ಮುಂದುವರಿದಿದ್ದು, ನಗರದಲ್ಲಿ ಕಸವಿಲ್ಲದ ರಸ್ತೆಯೇ ಇಲ್ಲದಂತಾಗಿದೆ. ಮತ್ತೊಂದೆಡೆ ರಸ್ತೆ ಗುಂಡಿಗಳ ಸಮಸ್ಯೆಯೂ ಬಗೆಹರಿದಿಲ್ಲ. ಸುಮಾರು ಏಳು ಕಿಲೋಮೀಟರ್‌ ರಸ್ತೆಯಲ್ಲಿ ನೂರಾರು ಗುಂಡಿಗಳಿರುವ ಪರಿಸ್ಥಿತಿ ಇದೆ. ಮೊದಲು ರಸ್ತೆಗಳ ದುರಸ್ತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಫ್ಲ್ಯಾಟ್‌ಗಳಿಗೆ ಕಸದ ಶುಲ್ಕವನ್ನು ಹೆಚ್ಚಿಸಿರುವುದನ್ನೂ ಪ್ರಶ್ನಿಸಿದ ಅಶೋಕ, ಈ ಹಿಂದೆ ₹40ರಷ್ಟಿದ್ದ ಶುಲ್ಕವನ್ನು ₹400ಕ್ಕೆ ಏರಿಸಲಾಗಿದೆ ಎಂದು ಆರೋಪಿಸಿದರು. ಹೊಸ ಟೆಂಡರ್‌ಗಳ ಮೂಲಕ ಜನರ ಮೇಲೆ ಮತ್ತಷ್ಟು ಹೊರೆ ಹಾಕಲಾಗುತ್ತಿದೆ. ಇದು ಸರ್ಕಾರವೇ ನಡೆಸುತ್ತಿರುವ ದರೋಡೆಯಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಇದೇ ವೇಳೆ, ಹಲವು ತಿಂಗಳಿಂದ ಲಕ್ಷಾಂತರ ಫಲಾನುಭವಿಗಳಿಗೆ ಪಿಂಚಣಿ ನೀಡಿಲ್ಲ ಎಂದು ಆರೋಪಿಸಿದ ಅವರು, ಸರ್ಕಾರದ ಬಳಿ ಹಣದ ಕೊರತೆ ಇದೆ ಎಂದು ಹೇಳಿಕೊಂಡು ಜನರಿಂದಲೇ ವಿವಿಧ ರೂಪದಲ್ಲಿ ತೆರಿಗೆ ಮತ್ತು ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದರು.

ಬೆಂಗಳೂರು ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ತೆರಿಗೆ ಸಂಗ್ರಹಕ್ಕೆ ಮಾತ್ರ ಸರ್ಕಾರ ಒತ್ತು ನೀಡುತ್ತಿದೆ. ಮುಂಬರುವ ಜಿಬಿಎ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರದ ಆಡಳಿತದ ಬಗ್ಗೆ ಜನರು ತಮ್ಮ ತೀರ್ಪು ನೀಡಲಿದ್ದಾರೆ ಎಂದು ಆರ್‌.ಅಶೋಕ ಹೇಳಿದರು.

About The Author