Hubli News: ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ನಾಗಮಂಗಲದಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಕಠಿಣ ಕ್ರಮಕ್ಕೆ ಮುಂದಾಗಿದೆ.
ಮುಂಜಾಗೃತ ಕ್ರಮವಾಗಿ ಹಾಗೂ ಸಾರ್ವಜನಿಕರಿಗೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅವಳಿ ನಗರದ ಕಮಿಷನರೇಟ್ ವ್ಯಾಪ್ತಿಯಿಂದ ಬೃಹತ್ ರೂಟ್ ಮಾರ್ಚ್ ಹಮ್ಮಿಕೊಳ್ಳಲಾಗಿತ್ತು. ನಗರದ ಶಹರ ಪೊಲೀಸ್ ಠಾಣೆಯಿಂದ ಆರಂಭವಾದ ರೂಟ್ ಮಾರ್ಚ್ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ನಗರದ ಬ್ರಾಡವೇ, ಕೊಪ್ಪಿಕರ ರಸ್ತೆ, ದಾಜಿಬಾನ್ ಪೇಟೆ, ಕ್ವಾನಿ ರಸ್ತೆ ಸೇರಿದಂತೆ ಪ್ರಮುಖ ಬೀದಿ ಬೀದಿಗಳಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.
ಒಂಬತ್ತನೇ, ಹನ್ನೊಂದು ದಿನದ ಗಣೇಶ ವಿಸರ್ಜನೆ ಹಾಗೂ ಈದ್ ಮೀಲಾದ್ ಮೆರವಣಿಗೆ ಏಕಕಾಲಕ್ಕೆ ಬಂದಿದ್ದು ರೂಟ್ ಮಾರ್ಚ್ ನಡೆಸಿ, ಸೂಕ್ತ ಭದ್ರತೆಗಾಗಿ ನಾವು ಸನ್ನದ್ಧರಾಗಿದ್ದೇವೆ ಎಂದು ಸಂದೇಶ ರವಾನಿಸಲಾಯಿತು. ಈ ಕುರಿತಂತೆ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಗಣೇಶ ಮೆರವಣಿಗೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಹಿಳೆಯರು, ಮಕ್ಕಳು, ವೃದ್ಧರ ಜೊತೆ ಅನುಚಿತವಾಗಿ ವರ್ತಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವದು. 9 ಮತ್ತು 11 ನೇ ದಿನದ ಗಣೇಶ ಮೆರವಣಿಗೆಗೆ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿ ಎಂಟು ಸೇಫ್ಟಿ ಐಲ್ಯಾಂಡ್ ಗಳನ್ನು ಗುರುತಿಸಲಾಗಿದೆ. ಇಲ್ಲಿ ವೈದ್ಯರ ತಂಡದ ವ್ಯವಸ್ಥೆ ಇರುತ್ತೆ. ಸುಸ್ತಾಗುವ, ತೊಂದರೆಯಾಗುವವರಿಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಮದ್ಯಪಾನ ಮತ್ತು ಮಾದಕ ವಸ್ತು ಸೇವಿಸುವುದನ್ನು ಹಿಡಿದು ಕ್ರಮ ಕೈಗೊಳ್ಳಲಾಗುವದು. ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಡ್ರೋನ್ ಕ್ಯಾಮೆರಾ ಸಹ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸುದ್ದಿ ಹರಡುವವರ ಮೇಲೆಯೂ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.