Bagalakote: ಬಾಗಲಕೋಟೆಯಲ್ಲಿ ಮಾತನಾಡಿರುವ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸಿ ಸಿ ಪಾಟೀಲ್, ಅರವಿಂದ್ ಬೆಲ್ಲದ್ ವಿರುದ್ಧ ಮತ್ತು ನರಗುಂದ ಶಾಸಕ ಸಿ.ಸಿ. ಪಾಟೀಲರ ಆರೋಪಗಳಿಗೆ ಕಾಶಪ್ಪನವರ್ ತಿರುಗೇಟು ನೀಡುವ ಮೂಲಕ ಪ್ರತಿಕ್ರಿಯಿಸಿದ್ದು, ಇದರಲ್ಲಿ 50ರಿಂದ 60 ಜನ ಧರ್ಮದರ್ಶಿಗಳಿದ್ದೇವೆ. ಇವರೆಲ್ಲರ ನಿರ್ಣಯ ಇದು. ಕೇವಲ ಅಧ್ಯಕ್ಷನಾದ ಮಾತ್ರಕ್ಕೆ ನನ್ನ ನಿರ್ಣಯವಲ್ಲ ಇದು. ನಾಳೆ ನನ್ನನ್ನೇ ಅಧ್ಯಕ್ಷ ಸ್ಥಾನದಿಂದ ತೆಗೆಯಬಹುದು. ಅಧ್ಯಕ್ಷ ಸ್ಥಾನದಿಂದ ಇಳಿಸಲು ಅವರಿಗೆ ಹಕ್ಕಿದೆ ಎಂದು ಕಾಶಪ್ಪನವರ್ ಹೇಳಿದ್ದಾರೆ.
ಅವರು ತೆಗೆದುಕ“ಂಡ ನಿರ್ಧಾರವನ್ನು ನಾನು ಅಧ್ಯಕ್ಷನಾಗಿ ನಿಮ್ಮ ಮುಂದೆ ಹೇಳಿದ್ದೇನೆ. ಈ ನಿರ್ಣಯ ಎಲ್ಲಿಯಾಗಬೇಕೋ ಅಲ್ಲೇ ಆಗಬೇಕು. ಇದಕ್ಕೂ ಸಿಸಿ ಪಾಟೀಲರಿಗೂ ಸಂಬಂಧವಿಲ್ಲ. ಯತ್ನಾಳ್‌ಗೂ ಸಂಬಂಧವಿಲ್ಲ. ಬೆಲ್ಲದ್‌ಗೂ ಸಂಬಂಧವಿಲ್ಲ. ಇವರು ಧರ್ಮದರ್ಶಿಗಳಲ್ಲ. ಇವರಪ್ಪನ ಮನೆಯಿಂದ ಏನಾದ್ರೂ ತಂದು ಹಾಕಿದ್ದಾರಾ..? ಎಂದು ಕಾಶಪ್ಪನವರ್ ಪ್ರಶ್ನಿಸಿದ್ದಾರೆ.
ಅಲ್ಲದೇ ನಾವು ಹಣ ಹಾಕಿದ್ದೇವೆ. ನಿರಾಣಿ ಸೇರಿ ಹಲವರು ದಾನ ಮಾಡಿದ್ದಾರೆ. ನಾನು ಯಾರ ಮನೆಗೂ ಹೋಗೋದಿಲ್ಲ. ನನ್ನ ಮನೆಗೆ ಬಂದವರನ್ನು ನಾನು ಸ್ವಾಗತ ಮಾಡುತ್ತೇನೆ. ಹಾಗಾಗಿ ನಿರಾಣಿಯವರು ನನ್ನ ಜತೆ ಮಾತನಾಡಿದರೆ, ನಾನು ಅವರ ಜತೆ ಮಾತನಾಡುತ್ತೇನೆ ಎಂದು ಕಾಶಪ್ಪನವರ್ ಹೇಳಿದ್ದಾರೆ.