ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ತೆರೆಗೆ ಸರಿಯುತ್ತಿರುವ ಹೊತ್ತಿನಲ್ಲಿಯೇ ಸಂಪುಟ ವಿಚಾರದ ಚರ್ಚೆ ಮುನ್ನೆಲೆಗೆ ಬಂದಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ನವೆಂಬರ್ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆಯ ಸುಳಿವನ್ನು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ನೀಡಿದ್ದರು. ಇದಾದ ಬೆನ್ನಲ್ಲೇ ಜೇರ್ವಗಿ ಶಾಸಕ ಡಾ. ಅಜಯ್ ಸಿಂಗ್ ಮಂತ್ರಿಗಿರಿಯ ಆಸೆ ಹೊರಹಾಕಿದ್ದರು.
ಆದರೆ ಇದಾದ ಬಳಿಕ ಮತ್ತೊಬ್ಬ ಕೈ ಶಾಸಕ ಮಂತ್ರಿಗಿರಿಯ ಕನಸು ಕಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೂ ಮಂತ್ರಿಗಿರಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಬಾಗೇಪಲ್ಲಿ ಕ್ಷೇತ್ರಕ್ಕೆ ಇದುವರೆಗೂ ಸಚಿವ ಸ್ಥಾನ ಭಾಗ್ಯ ಲಭಿಸಿಲ್ಲ. ನಾನು ಸೀನಿಯರ್ ಆಗಿದ್ದೇನೆ, ಮೂರು ಬಾರಿ ಶಾಸಕನಾಗಿದ್ದೇನೆ. ಹೀಗಾಗಿ ನನಗೂ ಒಂದು ಅವಕಾಶ ನೀಡಿ ಎಂದು ಕೇಳಿದ್ದೇನೆ ಎಂದು ಹೇಳುವ ಮೂಲಕ ಸಚಿವ ಸ್ಥಾನಕ್ಕಾಗಿ ಫೈಟ್ ನಡೆಸಿದ್ದಾರೆ.
ನಾನು ಈಗಾಗಲೇ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿಯಾಗಿ ಮಂತ್ರಿ ಪದವಿ ಕೊಡುವಂತೆ ಮನವಿ ಮಾಡಿದ್ದೇನೆ. ಕ್ಷೇತ್ರಕ್ಕೆ ಸಚಿವ ಸ್ಥಾನವಿಲ್ಲದೆ ಅಭಿವೃದ್ದಿ ಕುಂಠಿತವಾಗಿದೆ. ಅಭಿವೃದ್ದಿ ಮಾಡಲು ನನಗೂ ಒಂದು ಅವಕಾಶ ಕೊಡಿ ಎಂದು ಕೇಳಿದ್ದೇನೆ. ರಾಜ್ಯದಲ್ಲಿ ಯಾವ ಕ್ರಾಂತಿ ಆಗುತ್ತದೆ ಎನ್ನುವುದು ನನಗೆ ಗೊತ್ತಿಲ್ಲ. ಮಂತ್ರಿ ಸ್ಥಾನ ಕೊಟ್ಟರೇ ಕೆಲಸ ಮಾಡುತ್ತೇನೆ. ಇಲ್ಲವಾದರೂ ನನ್ನ ಜನರ ಜೊತೆ ನಾನು ಸುಖವಾಗಿ ನೆಮ್ಮದಿಯಿಂದ ಇರುತ್ತೇನೆ ಎಂದು ಶಾಸಕ ಸುಬ್ಬಾರೆಡ್ಡಿ ಹೇಳಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ನಾಯಕತ್ವದ ಬದಲಾವಣೆಯ ವಿಚಾರದಲ್ಲಿ ಸುಮ್ಮನಾಗಿರುವ ಶಾಸಕರು ಇದೀಗ ಒಬ್ಬೊಬ್ಬರಾಗಿ ಮಂತ್ರಿಗಿರಿಯ ಇಂಗಿತ ವ್ಯಕ್ತಪಡಿಸುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.