bengaluru metro : ಬೆಂಗಳೂರು ನಮ್ಮ ಮೆಟ್ರೋ ರೈಲು ಟಿಕೆಟ್ ದರ ಏರಿಕೆ ವಿರುದ್ಧ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ದೇಶದ ಇತರ ನಗರಗಳ ಮೆಟ್ರೋ ಪ್ರಯಾಣ ದರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲೇ ಅತಿಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗ ಇದಕ್ಕೆ ಸಂಸದರೂ ಕೂಡ ಸಾಥ್ ನೀಡಿದ್ದಾರೆ.
ಈ ಕುರಿತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಹ, ಮೆಟ್ರೋ ದರ ಏರಿಕೆ ನ್ಯಾಯಸಮ್ಮತವಲ್ಲ ಅಂತ ತಮ್ಮ ಅಭಿಪ್ರಾಯವನ್ನ ಹೊರಹಾಕಿದ್ದಾರೆ.
‘ಕರ್ನಾಟಕ ಸರ್ಕಾರವು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಮತ್ತು ಖಾಸಗಿ ವಾಹನಗಳನ್ನು ನಿರುತ್ಸಾಹಗೊಳಿಸುವ ಬದಲು, ಮೆಟ್ರೋ ದರ ಹೆಚ್ಚಳದ ಮೂಲಕ ಅದಕ್ಕೆ ತದ್ವಿರುದ್ಧವಾದದ್ದನ್ನು ಮಾಡುತ್ತಿದೆ. ಬೆಂಗಳೂರು ಮೆಟ್ರೋ ಪ್ರಯಾಣ ದರ ದೇಶದ ಇತರ ಮೆಟ್ರೋಗಳಿಗೆ ಸಮನಾಗಿರಬೇಕು ಆದರೆ ಕರ್ನಾಟಕದಲ್ಲಿ ಹಾಗಿಲ್ಲ. ದೆಹಲಿಯಲ್ಲಿ ಪ್ರಯಾಣಿಕರು 12 ಕಿ.ಮೀ ಪ್ರಯಾಣಕ್ಕೆ 30 ರೂ. ಪಾವತಿಸಿದರೆ, ಬೆಂಗಳೂರಿನಲ್ಲಿ 60 ರೂ. ನೀಡಬೇಕಾಗುತ್ತಿದೆ. ಇದು ದುಪ್ಪಟ್ಟು ಮೊತ್ತವಾಗಿದೆ. ಇನ್ನು ಈಗ ಗರಿಷ್ಠ ದರವನ್ನು 60 ರಿಂದ 90 ರೂ.ಗಳಿಗೆ ಹೆಚ್ಚಿಸುವ ಮೂಲಕ ಸರಿಸುಮಾರು ಶೇ 50 ಹೆಚ್ಚಳವು ನ್ಯಾಯಸಮ್ಮತವಲ್ಲ. ” ದೇಶದ ಬೇರೆ ಯಾವುದೇ ಮೆಟ್ರೋ ಇಷ್ಟು ಹೆಚ್ಚಿನ ಶುಲ್ಕ ವಿಧಿಸುವುದಿಲ್ಲ ಅಂತ ತೇಜಸ್ವಿ ಸೂರ್ಯ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇನ್ನು ಮೆಟ್ರೋ ದರ ಏರಿಕೆ ಜನರಿಗೆ “ಅನ್ಯಾಯದ ಹೊರೆ” ಎಂದು ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಸರ್ಕಾರವನ್ನು ಟೀಕೆ ಮಾಡಿದ್ದಾರೆ. ಮೆಟ್ರೋ ದರ ನಿಗದಿಯಲ್ಲಿ ಪಾರದರ್ಶಕತೆಯನ್ನು ಒತ್ತಾಯಿಸಿದ್ದರ ಜತೆಗೆ ದರ ನಿಗದಿ ಸಮಿತಿ ವರದಿಯನ್ನು ಪ್ರಕಟಿಸಬೇಕೆಂದು
ಪಿಸಿ ಮೋಹನ್ ಒತ್ತಾಯಿಸಿದ್ದು, ಪ್ರಯಾಣಿಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು BMRCL ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಪಾಸ್‌ಗಳನ್ನು ಪರಿಚಯಿಸಬೇಕು ಇದರಿಂದ ಸಾರ್ವಜನಿಕರು ಸಾರಿಗೆ ಬಳಕೆಯನ್ನು ಹೆಚ್ಚು ಉಪಯೋಗಿಸಲು ಅನುಕೂಲವಾಗಲಿದೆ ಎಂದು ಸಲಹೆ ನೀಡಿದ್ದಾರೆ.
ದೇಶದ ಪ್ರಮುಖ ಮೆಟ್ರೋ ಜಾಲಗಳಲ್ಲಿ, ಕೋಲ್ಕತ್ತಾ ಮೆಟ್ರೋ ಅತ್ಯಂತ ಅಗ್ಗದ ಪ್ರಯಾಣವನ್ನು ನೀಡುತ್ತದೆ ಎನ್ನಲಾಗುತ್ತಿದೆ. ಅಲ್ಲಿ ಕನಿಷ್ಠ 5 ರೂ. ಮತ್ತು ಗರಿಷ್ಠ 50 ರೂ. ದರದಲ್ಲಿ ಪ್ರಯಾಣ ದರ ನಿಗದಿಯಾಗಿದೆ. 25 ಕಿ.ಮೀ. ಮೀರಿ 30 ಕಿ.ಮೀ.ವರೆಗಿನ ಪ್ರಯಾಣಕ್ಕೆ ಗರಿಷ್ಠ 25 ರೂ. ಇದೆ. ಚೆನ್ನೈ ಮೆಟ್ರೋ 25 ಕಿ.ಮೀ.ಗೆ 50 ರೂ., ದೆಹಲಿ ಮೆಟ್ರೋ 60 ರೂ., ಬೆಂಗಳೂರು ಮೆಟ್ರೋದ ಹೊಸ ದರ ಈಗ 90 ರೂ. ಆಗಿದ್ದು ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣಿಕರ ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ.