ಪಕ್ಕದ ನೇಪಾಳದಲ್ಲಿ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ಸಂಭವಿಸಿದ ಅನಾಹುತದ ಸಾವು-ನೋವುಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ. ಭೋತೆ ಕೋಶಿ ನದಿಯ ಉಬ್ಬರ, ಭಾರೀ ಭೂಕುಸಿತ ಹಾಗೂ ಮಣ್ಣಿನ ಕುಸಿತದ ಪರಿಣಾಮ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ ಈಗ 1,127ಕ್ಕೆ ತಲುಪಿದೆ ಅಂತ ಹೇಳಲಾಗ್ತಿದೆ. ಇದರೊಂದಿಗೆ ಇನ್ನೂ 4,858 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸಹ ಮುಂದುವರಿದಿದೆ.
ಹೌದು ‘ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಸಂಭವಿಸಿದ ಭಾರೀ ಹಿಮ ಮತ್ತು ಬಂಡೆಗಳ ಕುಸಿತವೇ ಈ ಅನಾಹುತಕ್ಕೆ ಪ್ರಮುಖ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದ ಅಬ್ಬರಕ್ಕೆ ಹಲವು ಜಿಲ್ಲೆಗಳಲ್ಲಿ ಮನೆಗಳು, ರಸ್ತೆಗಳು, ಗಡಿ ವ್ಯಾಪಾರ ಕೇಂದ್ರಗಳು ಹಾಗೂ ಪ್ರಮುಖ ಜಲವಿದ್ಯುತ್ ಯೋಜನೆಗಳ ಮೂಲಸೌಕರ್ಯಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ.
ನೇಪಾಳ ಪೊಲೀಸರ ಮಾಹಿತಿ ಪ್ರಕಾರ, ಅತಿ ಹೆಚ್ಚು ಮೃತದೇಹಗಳು ಚಿತ್ವಾನ್ನಲ್ಲಿ ಪತ್ತೆಯಾಗಿದ್ದು, ಅಲ್ಲಿ 348 ಜನ ಸಾವಿಗೀಡಾಗಿದ್ದಾರೆ. ಇನ್ನು ನವಲ್ಪರಾಸಿ ಪೂರ್ವದಲ್ಲಿ 217, ಪಶ್ಚಿಮದಲ್ಲಿ 190 ಹಾಗೂ ನುವಾಕೋಟ್ನಲ್ಲಿ 155 ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಗೋರಖಾ, ಧಾದಿಂಗ್, ರಾಸುವಾ ಮತ್ತು ತನಹುನ್ ಜಿಲ್ಲೆಗಳಲ್ಲಿಯೂ ಕೂಡ ನೂರಾರು ಮೃತದೇಹಗಳನ್ನು ಹೊರತೆಗೆಯಲಾಗಿದೆಯಂತೆ! ಅಷ್ಟೇ ಅಲ್ಲದೆ, ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿದ್ದ 9 ಮೃತದೇಹಗಳು ಭಾರತದಲ್ಲಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಪತ್ತೆಯಾದ ಒಟ್ಟು ಮೃತದೇಹಗಳ ಪೈಕಿ 1,113 ಮೃತದೇಹಗಳ ಮರಣೋತ್ತರ ಪರೀಕ್ಷೆ ಹಾಗೂ ಗುರುತು ಪತ್ತೆ ಕಾರ್ಯ ಈಗಾಗಲೇ ಮುಗಿದಿದ್ದು, ಇದುವರೆಗೆ ಕೇವಲ 95 ಮೃತದೇಹಗಳನ್ನು ಮಾತ್ರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಇನ್ನು ಯಾರೂ ಗುರುತಿಸದ 911 ಮೃತದೇಹಗಳ ವಿವರಗಳನ್ನು ನೇಪಾಳ ಪೊಲೀಸರು ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದು, ನಾಪತ್ತೆಯಾದವರ ಕುಟುಂಬಗಳ ನೆರವಿಗೆ ಮುಂದಾಗಿದ್ದಾರೆ ಅಂತ ಹೇಳಲಾಗ್ತಿದೆ.
ಇನ್ನು ಇದರ ಜೊತೆಗೆ ‘ದುರಂತ ಪೀಡಿತ ಪ್ರದೇಶಗಳಲ್ಲಿ ಒಟ್ಟು 7,912ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದುವರೆಗೆ 6,541 ಜನರನ್ನು ಸುರಕ್ಷಿತ ಸ್ಥಳಗಳಿಗೆ ರಕ್ಷಿಸಲಾಗಿದೆ. ನಾಪತ್ತೆಯಾಗಿರುವ ಸಾವಿರಾರು ಮಂದಿಗಾಗಿ ಶೋಧ ಮುಂದುವರಿದಿದ್ದು, ಕಾರ್ಯಾಚರಣೆಯ ವೇಳೆ ಮತ್ತಷ್ಟು ಶವಗಳು ಸಿಗುವ ಸಾಧ್ಯತೆಯಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.




