ಕುಂಬಳಕಾಯಿಯ ಬೀಜವನ್ನ ತಿನ್ನೋದ್ರಿಂದ ಹಲವು ಪ್ರಯೋಜನಗಳಿದೆ. ಇದರಿಂದ ಆರೋಗ್ಯಕ್ಕೆ ತುಂಬಾ ತುಂಬಾ ಲಾಭಗಳಿದೆ. ಆದ್ರೆ ಈ ಕುಂಬಳಕಾಯಿ ಬೀಜವನ್ನು ಕುಂಬಳಕಾಯಿಯಿಂದ ತೆಗೆದು, ಅದರ ಸಿಪ್ಪೆ ತೆಗೆದು ಒಣಗಿಸಿ ಬಳಸೋಕ್ಕೆ ತುಂಬಾ ದಿನ ಬೇಕಾಗುತ್ತದೆ. ಟೈಮ್ ಕೂಡಾ ತುಂಬಾ ವೇಸ್ಟ್ ಆಗತ್ತೆ ಅನ್ನೋದು ನಿಮ್ಮ ಮಾತಾದ್ರೆ, ನೀವು ಈ ಕುಂಬಳಕಾಯಿ ಬೀಜವನ್ನು ಸೂಪರ್ ಮಾರ್ಕೆಟ್‌ನಿಂದಲೂ ಖರೀದಿ ಮಾಡಬಹುದು. ಹಾಗಾದ್ರೆ ಕುಂಬಳಕಾಯಿ ಬೀಜದ ಸೇವನೆಯಿಂದ ಆಗುವ ಪ್ರಯೋಜನಗಳೇನು ಅನ್ನೋದನ್ನ ತಿಳಿಯೋಣ ಬನ್ನಿ..
ಕುಂಬಳಕಾಯಿ ಬೀಜವನ್ನು ಹಾಗೆ ತಿನ್ನಬಹುದು. ಅಥವಾ ಯಾವುದಾದರೂ ಸಿಹಿ ತಿಂಡಿಗೆ ಬಳಸಿ ತಿನ್ನಬಹುದು. ಪಲ್ಯ, ಕೊಸೊಂಬರಿ ಮಾಡುವಾಗ ಬೇಕಾದ್ರೂ ನೀವು ಇದನ್ನು ಹಾಕಬಹುದು. ಈ ಬೀಜವನ್ನು ಹೆಚ್ಚಾಗಿ ಕರದಂಟು ಮಾಡುವಾಗ ಬಳಸಲಾಗುತ್ತದೆ. ಕರದಂಟಿನಲ್ಲಿ ಡ್ರೈಫ್ರೂಟ್ಸ್, ಒಣಕೊಬ್ಬರಿ, ಬೆಲ್ಲ, ಎಳ್ಳಿನ ಜೊತೆ ಈ ಕುಂಬಳಕಾಯಿ ಬೀಜ ಬಳಸುವುದರಿಂದ ಎಲ್ಲ ರೀತಿಯ ಪೋಷಕಾಂಶಗಳೂ ನಿಮ್ಮ ದೇಹ ಸೇರುತ್ತದೆ. ಇದರಿಂದ ನಿಮ್ಮ ತ್ವಚೆ, ಕೂದಲ ಜೊತೆ ಆರೋಗ್ಯವೂ ಹೆಲ್ದಿಯಾಗಿರುತ್ತದೆ.
ಇದು ಉಷ್ಣ ಪದಾರ್ಥವಾಗಿದ್ದು ಲಿಮಿಟ್‌ನಲ್ಲಿ ಇದನ್ನ ಸೇವನೆ ಮಾಡುವುದು ಉತ್ತಮ. ಹೊಟ್ಟೆ ನೋವು ಹೆಚ್ಚಾದ್ದಲ್ಲಿ, ಜೀರ್ಣಕ್ರಿಯೆ ಸಮಸ್ಯೆ ಇದ್ದಲ್ಲಿ, ಕೊಂಚ ಕೊಂಚ ಕುಂಬಳಕಾಯಿ ಬೀಜದ ಸೇವನೆ ಮಾಡಿದ್ದಲ್ಲಿ, ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹಲ್ಲು ಬಂದ ಮಕ್ಕಳಿಗೆ ಹೊಟ್ಟೆ ನೋವು ಹೆಚ್ಚಾಗಿದ್ದಲ್ಲಿ, ಈ ಬೀಜವನ್ನು ತಿನ್ನಲು ಕೊಡಿ. ಕುಂಬಳ ಬೀಜ ಸೇವಿಸಲಾಗದಿದ್ದಲ್ಲಿ, ಅದನ್ನು ಪುಡಿ ಮಾಡಿ ಕೊಡಿ.
ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗಿದ್ದರೆ, ಹಿಮೋಗ್ಲೊಬಿನ್ ಸಮಪ್‌ರಮಾಣದಲ್ಲಿ ಇಲ್ಲದಿದ್ದರೆ, ಕುಂಬಳಕಾಯಿ ಬೀಜ ಸೇವಿಸಿ. ಇದರಿಂದ ದೇಹದಲ್ಲಿ ರಕ್ತ ಮತ್ತು ಹಿಮೊಗ್ಲೋಬಿನ್ ಪ್ರಮಾಣ ಹೆಚ್ಚಾಗಿ, ಆರೋಗ್ಯ ಸುಧಾರಿಸುತ್ತದೆ. ಹೆಣ್ಣು ಮಕ್ಕಳು ಪ್ರತಿದಿನ 10 ಕಾಳು ಕುಂಬಳ ಬೀಜ ತಿಂದರೆ ಉತ್ತಮ. ಕೀಲು ನೋವು ಇದ್ದವರು ಕೂಡ ಇದರ ಸೇವನೆ ಮಾಡಬಹುದು.
ನಿಮಗೆ ಪದೇ ಪದೇ ತಲೆ ನೋವಾಗುತ್ತಿದ್ದರೆ, ಮೈಗ್ರೇನ್ ಸಮಸ್ಯೆ ಇದ್ದಲ್ಲಿ ಕುಂಬಳಕಾಯಿ ಬೀಜದ ಸೇವನೆ ಇದಕ್ಕೆ ಪರಿಹಾರ ನೀಡುತ್ತದೆ. ಪ್ರತಿದಿನ ಒಂದು ಸ್ಪೂನ್ ಪಮ್‌್ಕಿನ್ ಸೀಡ್ಸ್ ಪೌಡರನ್ನು ಉಗುರು ಬೆಚ್ಚು ಹಾಲಿನೊಂದಿಗೆ ರಾತ್ರಿ ಮಲಗುವುದಕ್ಕಿಂತ ಮುಂಚೆ ಸೇವಿಸಿ ಮಲಗಿ. ಕೆಲ ದಿನಗಳಲ್ಲೇ ನಿಮ್ಮ ಮೈಗ್ರೇನ್ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಹೃದಯದ ಸಮಸ್ಯೆ ಇದ್ದವರಿಗೂ ಇದು ಒಳ್ಳೆಯದು. ನೀವು ನಿಮ್ಮ ತೂಕ ಇಳಿಸಲು ಇಚ್ಛಿಸಿದರೆ ಪ್ರತಿದಿನ ಕುಂಬಳಕಾಯಿ ಬೀಜವನ್ನು 6 ಗ್ರಾಮ್‌ನಷ್ಟು ಸೇವಿಸಿದರೆ ಸಾಕು. ಇದು ದೇಹದಲ್ಲಿರುವ ಕೊಲೆಸ್ಟ್ರಾಲ್‌ನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ರಾತ್ರಿ 10 ಕುಂಬಳಕಾಯಿ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆದ ಬೀಜವನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ.
ನಿದ್ರಾಹೀನತೆ ಸಮಸ್ಯೆಗೂ ಇದು ರಾಮ ಬಾಣವಾಗಿದೆ. ಕುಂಬಳಕಾಯಿ ಬೀಜದ ಪುಡಿಯನ್ನು ಕುದಿಸಿದ ದನದ ಹಾಲಿನ ಜೊತೆ ತೆಗೆದುಕೊಂಡು ಮಲಗಬೇಕು. ಆಗ ಒಳ್ಳೆಯ ನಿದ್ದೆ ನಿಮ್ಮ ಪಾಲಾಗುತ್ತದೆ. ಮಹಿಳೆಯರಿಗೆ ಮುಟ್ಟಿನ ಹೊಟ್ಟೆ ನೋವಿದ್ದರೆ, ಕುಂಬಳಕಾಯಿ ಬೀಜವನ್ನು ಸೇವಿಸುವುದು ಉತ್ತಮಮ. ಋತುಚಕ್ರ ಶುರುವಾಗಲು 14 ದಿನ ಇರಬೇಕಾದರೆ, ಕುಂಬಳಕಾಯಿ ಬೀಜ ಸೇವಿಸುತ್ತ ಬನ್ನಿ. ಕ್ರಮೇಣ ನಿಮ್ಮ ಹೊಟ್ಟೆ ನೋವು ಕಡಿಮೆಯಾಗುತ್ತದೆ.
ಮುಖ್ಯವಾದ ವಿಚಾರ ಅಂದ್ರೆ ಯಾವುದೇ ಕಾರಣಕ್ಕೂ ಗರ್ಭಿಣಿಯರು, ಕುಂಬಳಕಾಯಿ ಬೀಜವನ್ನು ಸೇವಿಸಬೇಡಿ. ಇದು ಉಷ್ಣ ಪದಾರ್ಥವಾದ್ದರಿಂದ ಗರ್ಭಿಣಿಯರು ಇದನ್ನು ಸೇವಿಸಿದರೆ, ಮಗುವಿನ ಆರೋಗ್ಯದ ಮೇಲೆ ಇದರ ಪರಿಣಾಮವಾಗುತ್ತದೆ. ಆದ್ದರಿಂದ ಗರ್ಭಿಣಿಯರು ಕುಂಬಳಕಾಯಿ ಬೀಜದ ಉಪಯೋಗ ಮಾಡಬಾರದು. ಹಾಲು ಕುಡಿಸುವ ತಾಯಂದಿರು ಈ ಬೀಜವನ್ನು ಹೆಚ್ಚು ಬಳಸಬೇಡಿ. ಬಳುವುದಿದ್ದರೂ ಲಿಮಿಟ್‌ನಲ್ಲಿ ಬಳಸಿ. ಯಾಕಂದ್ರೆ ಉಷ್ಣತೆ ಹೆಚ್ಚಾಗಿ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ.
ತ್ವಚೆಯ ಸಮಸ್ಯೆ ಮತ್ತು ಕೂದಲು ಉದರುವ ಸಮಸ್ಯೆ ಇದ್ದವರು ಕೂಡ ಇದನ್ನು ಪ್ರತಿದಿನ ಸೇವಿಸಬಹುದು. ಇದು ನಿಮ್ಮ ಆರೋಗ್ಯವನ್ನು ಅಭಿವೃದ್ಧಿಗೊಳಿಸುವುದರ ಜೊತೆಗೆ, ನಿಮ್ಮ ಸೌಂದರ್ಯವನ್ನು ಕೂಡ ಇಮ್ಮಡಿಗೊಳಿಸುತ್ತದೆ. ಇನ್ನು ಕುಂಬಳಕಾಯಿ ಬೀಜ ತಿಂದಲ್ಲಿ ನಿಮಗೆ ಅಲರ್ಜಿ ಎಂದಾದ್ದಲ್ಲಿ ಆ ಬಗ್ಗೆ ವೈದ್ಯರ ಬಳಿ ವಿಚಾರಿಸಿ ನಂತರ ಸೇವಿಸುವುದು ಉತ್ತಮ.