Bengaluru News: ದೆಹಲಿಯ ಶ್ರದ್ಧಾ ವಾಕರ್ ಕೊಲೆ ಪ್ರಕರಣ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅದೇ ರೀತಿಯಲ್ಲಿ ಯುವತಿಯೊಬ್ಬಳನ್ನು ಭಯಾನಕವಾಗಿ ಕೊಲೆಗೈದು, 30ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಜ್ ನಲ್ಲಿಟ್ಟು ಹಂತಕನೊಬ್ಬ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಪ್ರಕರಣ ಬೆಂಗಳೂರು ಜನರನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ಕಳೆದ ಎರಡು ದಿನಗಳಿಂದ ಶವದ ವಾಸನೆ ಹೊರಗೆ ಬಂದಾಗ ಈ ಪ್ರಕರಣ ಬಯಲಾಗಿದೆ. ಕೊಲೆಯಾದ ಯುವತಿಯನ್ನು ಮಹಾಲಕ್ಷ್ಮಿ (೨೯) ಎಂದು ಗುರುತಿಸಲಾಗಿದೆ.
ಅಂದಹಾಗೆ, ಬೆಂಗಳೂರು ನಗರದ ಪೈಪ್ ಲೈನ್ ರಸ್ತೆಯ ವೀರಣ್ಣ ಭವನ ಬಳಿಯ ಇರುವ ಮನೆಯೊಂದರಲ್ಲಿ ಈ ಪ್ರಕರಣ ಬಯಲಾಗಿದೆ. ಹಂತಕ ಯುವತಿಯನ್ನು ಕೊಲೆಗೈದು ಪೀಸ್ ಪೀಸ್ ಮಾಡಿ ಫ್ರಿಜ್‌ನಲ್ಲಿ ಇಟ್ಟಿದ್ದಾನೆ. ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಗಂಡನಿಂದ ಆಕೆ ದೂರವಾಗಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಳು ಎಂದು ಹೇಳಲಾಗುತ್ತಿದೆ. ಹಲವು ದಿನಗಳ ಹಿಂದೆಯೇ ಈ ಕೊಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಕಳೆದ ಆರೇಳು ತಿಂಗಳಿನಿಂದ ಆ ಮನೆಯಲ್ಲಿ ಭೀಕರವಾಗಿ ಕೊಲೆಯಾದ ಯುವತಿ ವಾಸ ಮಾಡುತ್ತಿದ್ದಳು ಎನ್ನಲಾಗಿದೆ. ಕೊಲೆಯಾದ ಯುವತಿಗೆ ಒಂದು ಮಗು ಕೂಡ ಇತ್ತು ಎಂದು ಹೇಳಲಾಗುತ್ತಿದೆ.
ಹತ್ಯೆಯಾದ ಯುವತಿಯನ್ನು ಹೊರ ರಾಜ್ಯದವಳೆಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನಲೆ ಅದೇ ಬಿಲ್ಡಿಂಗ್ನ ಅಕ್ಕಪಕ್ಕದವರು ಇಂದು ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ. ಯುವತಿಯ ತಾಯಿ ಮತ್ತು ಅಕ್ಕ ಮನೆ ಬಳಿ ಬಂದು ಬೀಗ ಹೊಡೆದು ಒಳ ಹೋದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಕೇಂದ್ರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್, ಈ ಕುರಿತು ಹೇಳಿದಿಷ್ಟು. ‘ ಯುವತಿಯನ್ನು ಕೊಲೆಗೈದು 30ಕ್ಕೂ ಹೆಚ್ಚು ತುಂಡು ಮಾಡಿ ಸಿಂಗಲ್ ಡೋರ್ನ 165 ಲೀಟರ್ಸ್ ಫ್ರಿಜ್ ನಲ್ಲಿ ಬಾಡಿ ಇಡಲಾಗಿದೆ. ಮೃತ ಯುವತಿಯನ್ನು ಛತ್ತೀಸ್ಘಡ ಅಥವಾ ಪಶ್ಚಿಮ ಬಂಗಾಳ ಮೂಲದ ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. ಬೇರೆ ರಾಜ್ಯದವರು ಇಲ್ಲಿಯೇ ಸೆಟಲ್ ಆಗಿದ್ದವರು. ಗಂಡನ ಜೊತೆಗೆ ಬೇರೆಯಾಗಿದ್ದ ಮಹಿಳೆ, ಒಬ್ಬಳೆ ವಾಸವಾಗಿದ್ದಳು ಎಂದು ಹೇಳಿದ್ದಾರೆ.