Bengaluru: ಶೂ ಧರಿಸುವಾಗ, ಹೆಲ್ಮೆಟ್ ಹಾಕುವಾಗ ನೋಡಿ ಹಾಕಬೇಕು, ಅದರಲ್‌ಲಿ ಏನಾದರೂ ಇರುತ್ತದೆ ಅಂತಾ ನಾವು ನೀವು ಹಲವು ಸುದ್ದಿಗಳನ್ನು ಓದಿರುತ್ತೇವೆ. ಅದರಲ್ಲೂ ಶೂಸ್, ಕ್ರಾಕ್ಸ್ ಅಂಥಾ ಚಪ್ಪಲಿ ಧರಿಸುವಾಗಲಂತೂ, 1 ಬಾರಿ ಚೆಕ್ ಮಾಡಿಯೇ ಧರಿಸಬೇಕು. ಏಕೆಂದರೆ, ಅದರಲ್ಲಿ ಹಾವು, ಚೇಳು ಇರಬಹುದು.
ಇದನ್ನು ಹೇಳಲು ಕಾರಣವೇನೆಂದರೆ, ಬೆಂಗಳೂರಿನ ಆನೇಕಲ್‌ನಲ್ಲಿ ಓರ್ವ ವ್ಯಕ್ತಿ ಕ್ರಾಕ್ಸ್ ಚಪ್ಪಲಿ ಧರಿಸಿ, ಅದರಲ್ಲಿದ್ದ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ. ಮಂಜು ಪ್ರಕಾಶ್ ಎಂಬ 41 ವರ್ಷದ ವ್ಯಕ್ತಿ, ಆಚೆ ಹೋಗುವಾಗ ತಮ್ಮ ಕ್ರಾಕ್ಸ್ ಚಪ್ಪಲಿ ಧರಿಸಿ, ಹೋಗಿದ್ದಾರೆ. ಹೋಗಿ ಬಂದು, ಹಾಸಿಗೆ ಮೇಲೆ ಮಲಗಿದ್ದು, ಮಲಗಿದ್ದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಅರೇ ಇದೇನಿದು ಚಪ್ಪಲಿ ಧರಿಸಿ, ಸುತ್ತಾಡಿ ಬಂದ ಬಳಿಕವೂ ಅವರಿಗೆ ಚಪ್ಪಲಿಯಲ್ಲಿ ಹಾವಿರುವುದು ತಿಳಿಯಲಿಲ್ಲವಾ ಅಂತಾ ನೀವು ಕೇಳಬಹುದು. ಮಂಜು ಅವರಿಗೆ ಕಾಲಿಗೆ ಸ್ಪರ್ಶಿಸಿದರೆ, ತಿಳಿಯುವುದಿಲ್ಲ. ಇದೇ ಕಾರಣಕ್ಕೆ ಅವರ ಚಪ್ಪಲಿಯಲ್ಲಿ ಹಾವಿರುವುದು ಅವರಿಗೆ ತಿಳಿದಿರಲಿಲ್ಲ.
ಕೆಲ ವರ್ಷಗಳ ಹಿಂದೆ ಅಪಘಾತದಲ್ಲಿ ಕಾಲ ಸ್ಪರ್ಶ ಕಳೆದುಕೊಂಡಿದ್ದು, ಮಂಜುವಿಗೆ ಕಾಲಿಗೆ ಏನೇ ತಾಕಿದರೂ ಅರಿವಾಗುವುದಿಲ್ಲ. ಹಾಗಾಗಿಯೇ ಅವರಿಗೆ ಹಾವು ಕಚ್ಚಿದ್ದು, ತಿಳಿದಿರಲಿಲ್ಲ. ಆದರೆ ಆಚೆ ಹೋಗಿ ಬಂದು, ಮಲಗಿದಾಗ, ಹಾವಿನ ವಿಷ ಏರಿ, ಪ್ರಾಣಪಕ್ಷಿ ಹಾರಿಹೋಗಿದೆ.
ಮೃತದೇಹವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಬನ್ನೇರುಘಟ್‌ಟ ಪೋಲೀಸ್ ಸ್ಟೇಶನ್‌ನಲ್ಲಿ ಪ್ರಕರಣ ದಾಖಲಾಗಿದೆ.

