Bengaluru News: ಮಾನವೀಯ ಸೇವಾ ಕ್ಷೇತ್ರದಲ್ಲಿ ದೇಶ–ವಿದೇಶಗಳಲ್ಲಿ ಗಮನ ಸೆಳೆದಿರುವ ಒನ್ ವರ್ಲ್ಡ್ ಒನ್ ಫ್ಯಾಮಿಲಿ (OWOF) ಮಿಷನ್ನಿನ ಸಂಸ್ಥೆಗಳ ಸಲಹಾ ಮಂಡಳಿಗೆ ಭಾರತದ ಉದ್ಯಮ, ಹಣಕಾಸು ಹಾಗೂ ಆಡಳಿತ ವಲಯದ ನಾಲ್ವರು ಪ್ರಮುಖ ನಾಯಕರು ಸೇರ್ಪಡೆಯಾಗಿದ್ದಾರೆ.

ಎಚ್ಡಿಎಫ್ಸಿ ಲಿಮಿಟೆಡ್ನ ಮಾಜಿ ಅಧ್ಯಕ್ಷ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ದೀಪಕ್ ಪರೇಖ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ನ ಮಾಜಿ CEO ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್. ರಾಮದೊರೈ, ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಯ ಮಾಜಿ ಅಧ್ಯಕ್ಷ ಎಂ. ದಾಮೋದರನ್ ಹಾಗೂ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ನ ಮಾಜಿ ಅಧ್ಯಕ್ಷ ಎಸ್. ರವಿ ಅವರು ಸಲಹಾ ಮಂಡಳಿಗೆ ಸೇರಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಹೊಸ ನೇಮಕಾತಿಯಿಂದ ಮಿಷನ್ನ ಉಚಿತ ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕ ಉಪಾಹಾರ ಸೇವಾ ಉಪಕ್ರಮಗಳಿಗೆ ಆಡಳಿತ ಮೇಲ್ವಿಚಾರಣೆ ಹಾಗೂ ಕಾರ್ಯತಂತ್ರದ ಮಾರ್ಗದರ್ಶನ ಮತ್ತಷ್ಟು ಬಲವಾಗಲಿದೆ ಎಂದು ತಿಳಿಸಲಾಗಿದೆ.
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ನ ಪ್ರಶಾಂತಿ ಬಾಲಮಂದಿರ ಟ್ರಸ್ಟ್, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ (SSSUHE) ಹಾಗೂ ಶ್ರೀ ಅನ್ನಪೂರ್ಣ ಟ್ರಸ್ಟ್ ನಡೆಸುತ್ತಿರುವ ಉಚಿತ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕ ಉಪಾಹಾರ ಸೇವಾ ಕಾರ್ಯಚಟುವಟಿಕೆಗಳ ಕುರಿತು ಈ ನಾಯಕರಿಗೆ ಮಾಹಿತಿ ನೀಡಲಾಗಿದೆ. ತಮ್ಮ ದಶಕಗಳ ಅನುಭವದ ಮೂಲಕ ಮಿಷನ್ ಸೇವಾ ಕಾರ್ಯಗಳಿಗೆ ಅವರು ಮಾರ್ಗದರ್ಶನ ನೀಡಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ದೀಪಕ್ ಪರೇಖ್, ಉಚಿತ ಹಾಗೂ ಮೌಲ್ಯಾಧಾರಿತ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ವ್ಯಾಪಕ ಮಟ್ಟದಲ್ಲಿ ಒದಗಿಸುವಲ್ಲಿ ಟ್ರಸ್ಟ್ ಕಾರ್ಯವು ವಿಶಿಷ್ಟ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ, ಬುದ್ಧಿಶಕ್ತಿ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಸಂದರ್ಭದಲ್ಲಿ ವಿಶ್ವವಿದ್ಯಾಲಯವು ಉಚಿತ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಎಸ್. ರಾಮದೊರೈ ಅಭಿಪ್ರಾಯಪಟ್ಟಿದ್ದಾರೆ.
ಪಾರದರ್ಶಕ ಆಡಳಿತ ಮತ್ತು ಮೌಲ್ಯಾಧಾರಿತ ನಾಯಕತ್ವವು ಮಾನವೀಯ ದೃಷ್ಟಿಕೋನವನ್ನು ಸ್ಪಷ್ಟ ಸಾಮಾಜಿಕ ಪರಿಣಾಮವಾಗಿ ಪರಿವರ್ತಿಸುತ್ತದೆ ಎಂದು ಎಂ. ದಾಮೋದರನ್ ಹೇಳಿದ್ದಾರೆ. ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಯಾವುದೇ ಆರ್ಥಿಕ ಹೊರೆಯಿಲ್ಲದೆ ವೃತ್ತಿಪರ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸುವುದು ಮಹತ್ವದ ಕಾರ್ಯ ಎಂದು ಎಸ್. ರವಿ ಹೇಳಿದ್ದಾರೆ.
ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಸಲಹೆಗಾರರನ್ನು ಸ್ವಾಗತಿಸಿ, ಅವರ ಮಾರ್ಗದರ್ಶನವು ಮಿಷನ್ ಸೇವಾ ಉಪಕ್ರಮಗಳನ್ನು ಇನ್ನಷ್ಟು ಬಲಪಡಿಸಲಿದೆ ಎಂದು ತಿಳಿಸಿದ್ದಾರೆ.
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಉಚಿತ ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕ ಉಪಾಹಾರ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಭಾರತದಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ 6ನೇ ತರಗತಿಯಿಂದ ಪಿಎಚ್ಡಿ ವರೆಗೆ, ಎಂಬಿಬಿಎಸ್ ಸೇರಿ, ಉಚಿತ ಶಿಕ್ಷಣವನ್ನು ಒದಗಿಸುತ್ತಿದೆ. 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಭಾರತದ ಮೊದಲ ಉಚಿತ ಖಾಸಗಿ ಗ್ರಾಮೀಣ ವೈದ್ಯಕೀಯ ಕಾಲೇಜು ಕೂಡ ಈ ಮಿಷನ್ ಅಡಿಯಲ್ಲಿ ಸ್ಥಾಪನೆಯಾಗಿದೆ.




