ಬುಧವಾರ ಸುರಿದ ಭಾರಿ ಆಲಿಕಲ್ಲು ಮಳೆ ಮತ್ತು ಗುಡುಗು ಸಹಿತ ಮಳೆಯು ಬೆಂಗಳೂರು ನಗರದಲ್ಲಿ ಭಾರೀ ಅನಾಹುತಗಳನ್ನು ಸೃಷ್ಟಿಸಿದೆ. ಇನ್ನೂ ಮೇ 1ರವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ (IMD) ಪ್ರಕಾರ, ಇಂದು ಕೂಡ ಬೆಂಗಳೂರಿನಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದ್ದು, ನಗರವಾಸಿಗಳು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ನಿನ್ನೆ ಬುಧವಾರ ಒಂದೇ ದಿನ ಸುರಿದ ಧಾರಾಕಾರ ಮಳೆ ಹಲವು ಜೀವಹಾನಿ ಹಾಗೂ ಆಸ್ತಿ ಹಾನಿಗೆ ಕಾರಣವಾಗಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 10 ಮಂದಿ ಮೃತಪಟ್ಟಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದು 8 ಮಂದಿ ಸಾವನ್ನಪ್ಪಿದ್ದಾರೆ. ಉಳಿದ ಮೂವರು ಪ್ರತ್ಯೇಕ ಘಟನೆಗಳಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಗಾಳಿ ಹಾಗೂ ಮಳೆಯ ಪರಿಣಾಮವಾಗಿ ನಗರದಲ್ಲಿ 170ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, 408ಕ್ಕೂ ಹೆಚ್ಚು ಮರದ ಕೊಂಬೆಗಳು ಮುರಿದು ಬಿದ್ದಿವೆ. ಇದರಿಂದ ಹಲವು ಪ್ರಮುಖ ರಸ್ತೆಗಳು ಅಡಚಣೆಗೆ ಒಳಗಾಗಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಗರದ 5 ಪಾಲಿಕೆಗಳ ವ್ಯಾಪ್ತಿಯಲ್ಲಿ 68ಕ್ಕೂ ಹೆಚ್ಚು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 25 ವರ್ಷಗಳ ಬಳಿಕ ಏಪ್ರಿಲ್ ತಿಂಗಳಲ್ಲಿ ಇಂತಹ ದಾಖಲೆಯ ಮಳೆಯು ದಾಖಲಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೇ 1ರವರೆಗೆ ಮಳೆ ಮುಂದುವರಿಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ನಗರ ಆಡಳಿತವು ತುರ್ತು ಕ್ರಮಗಳನ್ನು ಕೈಗೊಂಡಿದೆ.




