ಬೆಂಗಳೂರು:ನಾಯಕ ಮಯಾಂಕ್ ಅಗರ್ವಾಲ್ (112*) ಮತ್ತು ಎಲ್.ಆರ್. ಚೇತನ್ (88) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 44 ರನ್ ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಬ್ಲಾಸ್ಟರ್ಸ್ ಪ್ರತಿಷ್ಠಿತ ಮಹಾರಾಜ ಟ್ರೋಫಿಯ ಫೈನಲ್ ತಲುಪಿದೆ.
ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ಮೊದಲನೇ ಕ್ವಾಲಿಫಯರ್ ಪಂದ್ಯದಲ್ಲಿ 227 ರನ್‌ಗಳ ಬೃಹತ್ ಮೊತ್ತವನ್ನು ಬೆಂಬತ್ತಿದ ಗುಲ್ಬರ್ಗ ಮೈಸ್ಟಿಕ್ಸ್ 18.2 ಓವರ್‌ಗಳಲ್ಲಿ 183 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಗುಲ್ಬರ್ಗ ಪರ ರೋಹನ್ ಪಾಟೀಲ್ 108 ರನ್ ಗಳಿಸಿ ಒಂಟಿಯಾಗಿ ಹೋರಾಟ ನೀಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಕೇವಲ 49 ಎಸೆತಗಳನ್ನೆದುರಿಸಿದ ರೋಹನ್ ಪಾಟೀಲ್ 10 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ 108 ರನ್ ಗಳಿಸಿ ರನೌಟ್‌ಗೆ ಬಲಿಯಾದಾಗ ಜಯ ಬೆಂಗಳೂರು ಕಡೆಗೆ ವಾಲಿತು.
ರೋನಿತ್ ಮೋರೆ ಎಸೆದ 18ನೇ ಓವರ್ ಪಂದ್ಯದ ಗತಿಯನ್ನೇ ಬದಲಾಯಿಸಿತು. ನಾಳೆಯ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ಬಲಿಷ್ಠ ಮೈಸೂರು ವಾರಿಯರ್ಸ್ ತಂಡವನ್ನು ಎದುರಿಸಲಿದ್ದು, ಫೈನಲ್ ತಲಪುವ ಎರಡನೇ ತಂಡ ಯಾವುದೆಂದು ತೀರ್ಮಾನವಾಗಲಿದೆ.
ಬೆಂಗಳೂರಿನಲ್ಲಿ ರನ್ ಮಳೆ:
ನಾಯಕ ಮಯಾಂಕ್ ಅಗರ್ವಾಲ್ (112*) ಅವರ ಅಬ್ಬರದ ಶತಕ ಹಾಗೂ ಎಲ್.ಆರ್. ಚೇತನ್ (88) ಅವರೊಂದಿಗೆ ದಾಖಲಾದ 162 ರನ್‌ಗಳ ಜೊತೆಯಾಟದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಮಹಾರಾಜ ಟ್ರೋಫಿಯ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 3 ವಿಕೆಟ್ ನಷ್ಟಕ್ಕೆ 227 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ಇದು ಮಹಾರಾಜ ಟ್ರೋಫಿಯಲ್ಲೇ ತಂಡವೊಂದು ಗಳಿಸಿದ ಗರಿಷ್ಠ ಮೊತ್ತವಾಗಿದೆ. ಮಯಾಂಕ್ ಅಗರ್ವಾಲ್ ಕೇವಲ 61 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 112 ರನ್ ಗಳಿಸಿ ಟೂರ್ನಿಯಲ್ಲಿ ವೈಯಕ್ತಿಕ ಎರಡನೇ ಶತಕ ದಾಖಲಿಸಿದರು. ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 105*ರನ್ ಗಳಿಸಿದ್ದ ಚೇತನ್ ಟೈಗರ್ಸ್ ವಿರುದ್ಧ ಅಬ್ಬರದ ಆಟ ಪ್ರದರ್ಶಿಸಿದರು.
ಕೇವಲ 48 ಎಸೆತಗಳನ್ನೆದುರಿಸಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದ ಚೇತನ್ 88 ರನ್ ಗಳಿಸಿ ಕಾವೇರಪ್ಪಗೆ ವಿಕೆಟ್ ಒಪ್ಪಿಸಿದರು. ಓವರ್ ಒಂದಕ್ಕೆ 11.35 ರನ್ ಗಳಿಸುವ ಗುರಿಹೊಂದಿದ ಗುಲ್ಬರ್ಗ ಮೈಸ್ಟಿಕ್ಸ್ ಆರಂಭದಿಂದಲೇ ಅಬ್ಬರದ ಆಟ ಪ್ರದರ್ಶಿಸಬೇಕಾದ ಅನಿವಾರ್ಯತೆ ಇದೆ.
ಧನುಶ್ ಗೌಡ್ ಹಾಗೂ ಅಜಯ್ ಗೌಡ ಅವರ ಬೌಲಿಂಗ್‌ನಲ್ಲಿ ಫೀಲ್ಡರ್‌ಗಳು ಆಕಾಶ ನೋಡುವಂತಾಯಿತು. ಧನುಶ್ ಗೌಡ ಎರಡೇ ಓವರ್‌ನಲ್ಲಿ 38 ರನ್ ನೀಡಿದರೆ, ಅಜಯ್ ಗೌಡ 4 ಓವರ್‌ಗಳಲ್ಲಿ 59 ರನ್ ನೀಡಿ ಟೂರ್ನಿಯಲ್ಲಿಯೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಎನಿಸಿದರು. ವಿದ್ವತ್ ಕಾವೇರಪ್ಪ 48 ರನ್‌ಗೆ 2 ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್:
ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 3 ವಿಕೆಟ್ 227 (ಮಯಾಂಕ್ ಅಗರ್ವಾಲ್ 112*, ಎಲ್.ಆರ್. ಚೇತನ್ 88, ಅನಿರುಧ್ ಜೋಶೀ 20,ವಿದ್ವತ್ ಕಾವೇರಪ್ಪ 48ಕ್ಕೆ 2)
ಗುಲ್ಬರ್ಗ ಮಿಸ್ಟಿಕ್ಸ್: 18.2 ಓವರ್‌ಗಳಲ್ಲಿ 183 ರನ್ (ರೋಹನ್ ಪಾಟೀಲ್ 108, ಮನೋಜ್ ಭಾಂಡಗೆ 26, ಪ್ರಣವ್ ಭಾಟಿಯಾ 14, ರೋನಿತ್ ಮೋರೆ 41ಕ್ಕೆ 3, ಸುಚಿತ್ 29ಕ್ಕೆ 2)