ಒಂಟಿ ವೃದ್ಧರಿಗೆ ಕಿರುಕುಳ ಕೊಟ್ರೆ ಹುಷಾರ್..!

ಇನ್ಮುಂದೆ ವೃದ್ದರ ತಂಟೆಗೆ ಹೋದ್ರೆ ಹುಷಾರ್ …. ಯಾಕಂದ್ರೆ ರಾಜ್ಯದಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಇನ್ನುಮುಂದೆ ಪೊಲೀಸರ ನೇರ ‘ಆಸರೆ’ ದೊರೆಯಲಿದೆ. ಸಮುದಾಯ ಪೊಲೀಸ್ ಪರಿಕಲ್ಪನೆಯಡಿಯಲ್ಲಿ ರಾಜ್ಯ ಪೊಲೀಸ್ ಇಲಾಖೆ ವಿನೂತನವಾದ ‘ಆಸರೆ’ ಯೋಜನೆಯನ್ನು ಜಾರಿಗೆ ತಂದಿದ್ದು, ಕಷ್ಟಕಾಲದಲ್ಲಿ ನಾವು ನಿಮ್ಮ ಜೊತೆಯಲ್ಲಿದ್ದೇವೆ ಎಂಬ ಭರವಸೆಯನ್ನು ವೃದ್ಧರಿಗೆ ನೀಡುವ ಉದ್ದೇಶ ಹೊಂದಿದೆ.

ಕರ್ನಾಟಕದಲ್ಲಿ ಹಿರಿಯ ನಾಗರಿಕರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ವಿಶೇಷವಾಗಿ ಒಂಟಿಯಾಗಿ ವಾಸಿಸುತ್ತಿರುವ ವೃದ್ಧರು ಸಾಮಾಜಿಕ, ದೈಹಿಕ, ಮಾನಸಿಕ ಹಾಗೂ ಸೈಬರ್ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಹಾಗಾಗಿ ಅವರ ಸುರಕ್ಷತೆ ಮತ್ತು ಯೋಗಕ್ಷೇಮದತ್ತ ಗಮನ ಹರಿಸುವ ಉದ್ದೇಶದಿಂದ ‘ಆಸರೆ’ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ.

ಸಂವಿಧಾನದ ಕಲಂ 21ರ ಅಡಿಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದ್ದು, ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಎಚ್ಚರಿಕೆ ನೀಡಲಾಗುತ್ತದೆ. ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಿಯೊಂದು ಬೀಟ್‌ನಲ್ಲಿ ಒಬ್ಬ ಹೆಡ್ ಕಾನ್‌ಸ್ಟೆಬಲ್ ಮತ್ತು ಒಬ್ಬ ಕಾನ್‌ಸ್ಟೆಬಲ್ ಅವರನ್ನು ಕಮ್ಯುನಿಟಿ ಪೊಲೀಸ್ ಅಧಿಕಾರಿ ಆಗಿ ನೇಮಕ ಮಾಡಲಾಗುತ್ತದೆ. ಹಿರಿಯ ನಾಗರಿಕರ ಮನೆಗಳಿಗೆ ಭೇಟಿ ನೀಡಿ, ಯೋಗಕ್ಷೇಮ ವಿಚಾರಿಸಬೇಕು. ತ್ರೈಮಾಸಿಕ ಸಭೆ ನಡೆಸಿ ಪರಿಶೀಲನೆ ಮಾಡುವುದು ಕಡ್ಡಾಯ ಅಂತ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಜೊತೆಗೆ ಆಸರೆ ಯೋಜನೆಯ ಅನುಷ್ಠಾನಕ್ಕೆ ಒಬ್ಬ ASI ಅಥವಾ PSIಯನ್ನು ಉಸ್ತುವಾರಿ ಅಧಿಕಾರಿಯಾಗಿ ನೇಮಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. M.A ಸಲೀಂ ನಿರ್ದೇಶನ ನೀಡಿದ್ದಾರೆ. ಆಸರೆ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅವರನ್ನು ರಾಜ್ಯಮಟ್ಟದ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಯೋಜನೆಯನ್ನು ನಿರ್ಲಕ್ಷಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ವರದಿ : ಲಾವಣ್ಯ ಅನಿಗೋಳ

About The Author