Friday, November 28, 2025

Latest Posts

ಕಾಂಗ್ರೆಸ್‌ ವಿರುದ್ಧ ಮತ ಹುಷಾರ್‌! ಕುರುಬ ಸಮುದಾಯದಿಂದ ಎಚ್ಚರಿಕೆ

- Advertisement -

ರಾಜಕೀಯದ ಕುರ್ಚಿ ಕಿತ್ತಾಟ ಮತ್ತಷ್ಟು ತೀವ್ರಗೊಂಡಿದ್ದು, ಡಿಕೆ ಶಿವಕುಮಾರ್ ಪರವಾಗಿ ಒಕ್ಕಲಿಗ ಸಮುದಾಯ ಬ್ಯಾಟಿಂಗ್ ಆರಂಭಿಸಿದ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಪರವಾಗಿ ಕುರುಬ ಸಮುದಾಯವೂ ಅಖಾಡಕ್ಕಿಳಿದಿದೆ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಪಟ್ಟದಿಂದ ಕೆಳಗೆ ಇಳಿಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಹಾಕುವುದಾಗಿ ಸಮುದಾಯ ನಾಯಕರು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಇಂದು ಬೆಂಗಳೂರಿನ ಕರ್ನಾಟಕ ಪ್ರದೇಶ ಕುರುಬ ಸಮಾಜದ ಕಛೇರಿಯಲ್ಲಿ ಸಮುದಾಯದ ಶ್ರೀಗಳು ಮತ್ತು ಮುಖಂಡರು ಸಭೆ ನಡೆಸಿ, ಸಿಎಂ ಸ್ಥಾನದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದು ಸ್ಪಷ್ಟವಾಗಿ ಹೈಕಮಾಂಡ್‌ಗೆ ಒತ್ತಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ತಿಂತುರಿ ಸಿದ್ಧರಾಮನಂದಪೂರಿ ಸ್ವಾಮೀಜಿ, ಇತ್ತೀಚೆಗೆ ರಾಜ್ಯದಲ್ಲಿ ರಾಜಕೀಯ ಗೊಂದಲಗಳು ಬಿರುಕು ಬಿಟ್ಟಿದ್ದು, ಅನೇಕ ಸಮುದಾಯಗಳು ಅಸಮಾಧಾನಗೊಂಡಿವೆ, ಅದರಲ್ಲಿ ಕುರುಬ ಸಮುದಾಯವೂ ಒಂದಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಹೈಕಮಾಂಡ್ ಇಂತಹ ಪರಿಸ್ಥಿತಿ ಹುಟ್ಟಿಕೊಳ್ಳದಂತೆ ನೋಡಿಕೊಳ್ಳಬೇಕಿತ್ತು ಎಂದ ಅವರು, ಒಬ್ಬ ವ್ಯಕ್ತಿಯ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆ ನೀಡಿ, ದೆಹಲಿಗೆ ಹೋಗಿ ಲಾಬಿ ಮಾಡುವ ಪರಿಸ್ಥಿತಿ ತಲುಪಿದದ್ದು ಸರಿಯಲ್ಲ ಎಂದು ಟೀಕಿಸಿದರು.

ಘನತೆ ಹೊಂದಿರುವ ಸಿದ್ದರಾಮಯ್ಯ ಬಗ್ಗೆ ಹೈಕಮಾಂಡ್ ಗೌರವಯುತ ನಿರ್ಧಾರ ಕೈಗೊಳ್ಳಬೇಕು, ಅವರ ಗೌರವಕ್ಕೆ ಚ್ಯುತಿ ತಂದರೆ ಪರಿಣಾಮ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶದಲ್ಲೂ ಬೀಳುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು. ಸಿದ್ದರಾಮಯ್ಯರು ಕೇವಲ ಕುರುಬ ಸಮುದಾಯದ ನಾಯಕನಷ್ಟೇ ಅಲ್ಲ, ಅಹಿಂದ ಸಮುದಾಯದ ಪ್ರತಿನಿಧಿ ಎಂದು ಗುರುತಿಸಿಕೊಂಡಿದ್ದಾರೆ, ಇದಕ್ಕೆ ಧಕ್ಕೆಯಾಗದಂತೆ ಹೈಕಮಾಂಡ್ ನಡೆದುಕೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಪಕ್ಷದ ವಿಚಾರದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳದೇ ಇರುವುದರಿಂದಲೇ ಇಂದಿನ ಪರಿಸ್ಥಿತಿ ಉಂಟಾಗಿದೆ, ಇದು ಪಕ್ಷಕ್ಕೂ ಮತ್ತು ವ್ಯಕ್ತಿಗೂ ತೊಂದರೆಯಾಗುತ್ತದೆ ಎಂದು ಹೇಳಿದರು. ಯಾವುದೇ ಸಮುದಾಯದ ಸ್ವಾಮೀಜಿಗಳು ಇಂತಹ ರಾಜಕೀಯ ವಿಷಯದಲ್ಲಿ ನಿಲುವು ತೆಗೊಳ್ಳುವುದು ಸರಿಯಲ್ಲ, ಆದರೆ ನಾವು ಸಿದ್ದರಾಮಯ್ಯರಿಗೆ ಕುರುಬ ಸಮುದಾಯದ ಕಾರಣಕ್ಕೆ ಬೆಂಬಲ ನೀಡುವುದಿಲ್ಲ, ಬಡವರು ಹಾಗೂ ದೀನದಲಿತರ ಪರವಾಗಿ ಅವರು ನಿಂತಿರುವ ಕಾರಣಕ್ಕೆ ಬೆಂಬಲಿಸುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss