Political News: ಮಾಜಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಭಾರತ್ ಜೋಡೋ ಯಾತ್ರೆ 5 ವರ್ಷ ಪೂರೈಸಿದ ಹಿನ್ನೆಲೆ ಶುಭ ಕೋರಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿರುವ ಸಿದ್ದರಾಮಯ್ಯ, ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದ ಭಾರತ್ ಜೋಡೋ ಯಾತ್ರೆ ಎಂದು ಬಣ್ಣಿಸಿದ್ದಾರೆ.
ದ್ವೇಷ, ವಿಭಜನೆ ಮತ್ತು ಅಸಹಿಷ್ಣುತೆಯ ವಾತಾವರಣದ ನಡುವೆ ಪ್ರೀತಿ, ಸೌಹಾರ್ದತೆ, ಸಹಬಾಳ್ವೆ ಮತ್ತು ಏಕತೆಯ ಸಂದೇಶವನ್ನು ಹೊತ್ತು ದೇಶದ ಉದ್ದಗಲಕ್ಕೂ ನಡೆದ ಪಯಣವೇ ಭಾರತ್ ಜೋಡೋ ಯಾತ್ರೆ.
ರಾಹುಲ್ ಗಾಂಧಿಯವರೊಂದಿಗೆ ಆ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ನನಗೆ, ಅದು ಕೇವಲ ರಾಜಕೀಯ ಪಾದಯಾತ್ರೆಯಾಗಿರಲಿಲ್ಲ. ರೈತರು, ಕಾರ್ಮಿಕರು, ಯುವಕರು, ಮಹಿಳೆಯರು, ಶೋಷಿತರು, ಅವಕಾಶ ವಂಚಿತರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರ ಬದುಕು, ನೋವು ಮತ್ತು ನಿರೀಕ್ಷೆಗಳನ್ನು ನೇರವಾಗಿ ಆಲಿಸಿದ ಜನಸಂಪರ್ಕದ ಮಹಾಪಯಣವಾಗಿತ್ತು ಎಂದು ಸಿದ್ದರಾಮಯ್ಯ ಸ್ಮರಿಸಿದ್ದಾರೆ.
ಚಾಮರಾಜನಗರ ಆಕ್ಸಿಜನ್ ದುರಂತದ ಸಂತ್ರಸ್ತ ಕುಟುಂಬಗಳ ನೋವನ್ನು ಆಲಿಸಿದ್ದು, ಗಿಗ್ ಕಾರ್ಮಿಕರ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದು, ಜನರ ಧ್ವನಿಯನ್ನು ಆಡಳಿತದ ನೀತಿಗಳಾಗಿ ಪರಿವರ್ತಿಸುವ ಚಿಂತನೆಗೆ ದಾರಿ ಮಾಡಿಕೊಟ್ಟಿದ್ದು ಭಾರತ್ ಜೋಡೋ ಯಾತ್ರೆಯ ಮಾನವೀಯ ಮುಖಕ್ಕೆ ಸಾಕ್ಷಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ದ್ವೇಷದಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಪ್ರೀತಿಯಿಂದ ಮಾತ್ರ ಭಾರತವನ್ನು ಕಟ್ಟಲು ಸಾಧ್ಯ. ಇಂದು ಭಾರತ್ ಜೋಡೋ ಯಾತ್ರೆಯನ್ನು ನೆನಪಿಸಿಕೊಳ್ಳುವಾಗ, ಅದರ ಹೆಜ್ಜೆಗಳು ಕೇವಲ ರಸ್ತೆಗಳ ಮೇಲೆ ಮೂಡಿದ ಹೆಜ್ಜೆಗಳಲ್ಲ, ಅವು ಭಾರತೀಯರ ಹೃದಯಗಳನ್ನು ಬೆಸೆಯುವ ಹೆಜ್ಜೆಗಳಾಗಿದ್ದವು ಎಂಬುದನ್ನು ಮರೆಯಬಾರದು.
ವಿವಿಧತೆಯಲ್ಲಿ ಏಕತೆಯೇ ಭಾರತದ ಶಕ್ತಿ. ಧರ್ಮ, ಭಾಷೆ, ಜಾತಿ ಬೇರೆ ಬೇರೆ ಇರಬಹುದು, ಆದರೆ ನಮ್ಮ ದೇಶ ಒಂದೇ, ನಮ್ಮ ಸಂವಿಧಾನ ಒಂದೇ, ನಮ್ಮ ಕನಸು ಒಂದೇ. ಭಾರತವನ್ನು ಜೋಡಿಸುವ ಈ ಪಯಣ ನಿಲ್ಲಬಾರದು. ಸಾಮರಸ್ಯದ ಧ್ವನಿ ಮತ್ತಷ್ಟು ಗಟ್ಟಿಯಾಗಬೇಕು. ಜನರಿಗಾಗಿ, ಜನರ ಜೊತೆ ನಡೆಯುವ ರಾಜಕಾರಣ ಮುಂದುವರಿಯಬೇಕು ಎಂದು ಹಿರಿಯ ರಾಜಕಾರಣಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.




