Bhatkala News: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ತಡರಾತ್ರಿ ರೌಡಿಶೀಟರ್ಗಳ ಮಾರಾಮಾರಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಇಬ್ಬರು ಗುಂಪುಗಳ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಪೊಲೀಸರಿಗೇ ಚಾಕು ಇರಿದಿರುವ ಆರೋಪ ಕೇಳಿಬಂದಿದೆ.
ಘಟನೆಯಲ್ಲಿ ಹವಾಲ್ದಾರ್ ಸಂಗಪ್ಪ ಹಾಗೂ ಕಾನ್ಸ್ಟೇಬಲ್ ವಿನಾಯಕ್ ಶಟ್ಟಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇದೇ ವೇಳೆ ಮನೋಜ್ ಎಂಬ ಯುವಕನಿಗೂ ಚಾಕು ಇರಿದಿದ್ದು, ಮುರುಡೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮುರುಡೇಶ್ವರದ ಕಮಾನಿನ ಬಳಿ ರೌಡಿಶೀಟರ್ ರಾಜು ಹಾಗೂ ಆತನ ಗುಂಪು ಮನೋಜ್ ಎಂಬಾತನೊಂದಿಗೆ ಜಗಳವಾಡುತ್ತಿದ್ದ ವೇಳೆ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ಹವಾಲ್ದಾರ್ ಸಂಗಪ್ಪ ಹಾಗೂ ಕಾನ್ಸ್ಟೇಬಲ್ ವಿನಾಯಕ್ ಶಟ್ಟಿ ಜಗಳ ಬಿಡಿಸಲು ಮುಂದಾಗಿದ್ದಾರೆ.
ಈ ವೇಳೆ ಪೊಲೀಸರ ಮೇಲೆಯೇ ಚಾಕುವಿನಿಂದ ದಾಳಿ ನಡೆಸಲಾಗಿದೆ ಎನ್ನಲಾಗಿದ್ದು, ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ವೇಳೆ ಮನೋಜ್ಗೂ ಚಾಕು ಇರಿದಿರುವ ಆರೋಪ ಕೇಳಿಬಂದಿದೆ. ಗಾಯಗೊಂಡ ಇಬ್ಬರು ಪೊಲೀಸರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆದರ್ಶ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜು, ರಿತೀಕ್, ಮದನ್ ನಾಯ್ಕ್, ಯೋಗೇಶ್ ಹಾಗೂ ದರ್ಶನ್ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜು ಹಾಗೂ ಮನೋಜ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.




