ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದೆ. ಸುಮಾರು ಆರು ದಶಕಗಳ ಕಾಲ ಒಟ್ಟಾಗಿ ಜೀವನ ನಡೆಸಿದ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಈ ಘಟನೆ ಗ್ರಾಮಸ್ಥರ ಕಣ್ಣೀರು ತರಿಸುವಂತಾಗಿದೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗುಂಡಪ್ಪ ಹೋಡಗೆ (85) ಹಾಗೂ ಅವರ ಪತ್ನಿ ಲಕ್ಷ್ಮಿಬಾಯಿ ಹೋಡಗೆ (83) ಅವರು ಒಂದೇ ದಿನದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮೊದಲು ಲಕ್ಷ್ಮಿಬಾಯಿ ಹೋಡಗೆ ಅವರು ನಿಧನರಾಗಿದ್ದು, ಅವರ ಸಾವಿನ ಸುದ್ದಿ ತಿಳಿದ ಬೆನ್ನಲ್ಲೇ ಪತಿ ಗುಂಡಪ್ಪ ಹೋಡಗೆ ಕೂಡ ಕೊನೆಯುಸಿರೆಳೆದಿದ್ದಾರೆ.
ದಂಪತಿಯ ಸಾವಿನ ಸುದ್ದಿ ಗ್ರಾಮಸ್ಥರು ಮತ್ತು ಬಂಧು-ಬಳಗದವರಲ್ಲಿ ಆಘಾತ ಮೂಡಿಸಿದೆ. ಇವರಿಗೆ ನಾಲ್ವರು ಪುತ್ರಿಯರು, ಮೂವರು ಪುತ್ರರು ಹಾಗೂ ಹಲವಾರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವಿದೆ. ದಂಪತಿಯ ದೇಹಗಳನ್ನು ಪಕ್ಕಪಕ್ಕ ಇಟ್ಟು ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ಹೃದಯವಿದ್ರಾವಕ ಘಟನೆಯು ಮರಣದಲ್ಲೂ ಒಂದಾದ ಪ್ರೇಮಿಗಳ ಕಥೆಯಂತೆ ಎಲ್ಲರ ಮನಸ್ಸನ್ನೂ ಮುಟ್ಟಿದೆ. ದೇ ರೀತಿಯ ದುಃಖದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿಯೂ ನಡೆದಿದೆ. ತಮ್ಮನ ಸಾವಿನ ಸುದ್ದಿ ತಿಳಿದ ಅಣ್ಣನಿಗೆ ಹೃದಯಾಘಾತವಾಗಿ ಆತನೇ ಮೃತ ಪಟ್ಟಿದ್ದಾನೆ.
ತಮ್ಮ ಸತೀಶ್ ಬಾಗನ್ನವರ್ (16) ಅನಾರೋಗ್ಯದಿಂದ ನಿಧನರಾದರು. ಈ ದುಃಖದ ಸುದ್ದಿ ತಿಳಿದ ತಕ್ಷಣ ಅಣ್ಣ ಬಸವರಾಜ್ ಬಾಗನ್ನವರ್ (24) ಅವರಿಗೆ ಹೃದಯಾಘಾತ ಸಂಭವಿಸಿ ನಿಂತಲ್ಲಿಯೇ ಕುಸಿದು ಬಿದ್ದು ಪ್ರಾಣಬಿಟ್ಟರು. ಸಹೋದರರಿಬ್ಬರ ಸಾವಿನಿಂದ ಗ್ರಾಮದಲ್ಲೇ ಶೋಕದ ಛಾಯೆ ಆವರಿಸಿತ್ತು. ಇಬ್ಬರು ಯುವ ಮಕ್ಕಳನ್ನು ಕಳೆದುಕೊಂಡ ಪೋಷಕರು ಆಘಾತದಿಂದ ತತ್ತರಿಸಿದ್ದರು.
ವರದಿ : ಲಾವಣ್ಯ ಅನಿಗೋಳ

