Uttar Pradesh: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಆದರೆ, 2014 ಹಾಗೂ 2019ರಲ್ಲಿ ದೊಡ್ಡ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿಗೆ, 2024ರ ಚುನಾವಣೆಯಲ್ಲಿ ಸರಳ ಬಹುಮತವೂ ಸಿಕ್ಕಿಲ್ಲ. ಎನ್ಡಿಎ ಮೈತ್ರಿಕೂಟದ ಬಲದಿಂದ ಮೋದಿ ಪ್ರಧಾನಿಯಾಗಿದ್ದಾರೆ. ಆದರೆ, ಉತ್ತರಪ್ರದೇಶದಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ಮುನ್ನಡೆ ಸಾಧಿಸಿದ್ದ ಸಮಾಜವಾದಿ ಪಕ್ಷ ಅಖಿಲೇಶ್ ಯಾದವ್ಗೆ ಒಂದೇ ವಾರದಲ್ಲಿ ದೊಡ್ಡ ಶಾಕ್ ಸಿಕ್ಕಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದ್ದ ಬಿಜೆಪಿ ದೊಡ್ಡ ಆಘಾತವನ್ನು ಅನುಭವಿಸಿದೆ. ಮ್ಯಾಜಿಕ್ ನಂಬರ್ 272ನ್ನು ತಲುಪಲು ಸಾಧ್ಯವಾಗದೇ, ತೀವ್ರ ಹಿನ್ನಡೆ ಅನುಭವಿಸಿದೆ. ಆದರೆ, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹಾಗೂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸಹಕಾರದಿಂದ ಮೋದಿ ಪ್ರಧಾನಿಯಾಗಿದ್ದಾರೆ. ಮೋದಿ ಅವರೆನೋ ಪ್ರಧಾನಿಯಾಗಿದ್ದಾರೆ. ಆದರೆ, ಕಳೆದ ಎರಡು ಬಾರಿಯಂತೆ ಬಾರಿ ಯಾರ ಹಂಗು ಇಲ್ಲದೇ ಆಡಳಿತ ನಡೆಸಲು ಸಾಧ್ಯವಿಲ್ಲ. ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾದರೆ ಅದಕ್ಕೆ ಟಿಡಿಪಿ ಹಾಗೂ ಜೆಡಿಯು ಪಕ್ಷಗಳ ಅಭಿಪ್ರಾಯ ಕೇಳಿಬೇಕಾಗುತ್ತಿದೆ.
ಕಳೆದ ಬಾರಿಯಂತೆ ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿ ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನಗಳಿದ್ರೆ, ಬಿಜೆಪಿ ಏಕಾಂಗಿಯಾಗಿ ಅಧಿಕಾರ ನಡೆಬಹುದಾಗಿತ್ತು. ಆದರೆ, ಯೋಗಿ ನಾಡಲ್ಲಿ ಈ ಬಾರಿ ಬಿಜೆಪಿ ಗೆದ್ದಿದ್ದು ಕೇವಲ 33 ಸ್ಥಾನಗಳನ್ನು ಮಾತ್ರ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಯುಪಿಯಲ್ಲಿ ಎಸ್‌ಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 37 ಸ್ಥಾನ ಗೆದ್ದು ಸಂತಸದಲ್ಲಿರುವ ಸಮಾಜವಾದಿ ಪಕ್ಷ ಅರ್ಧಡಜನ್ನಷ್ಟು ಸಂಸದರನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.
ಇಂಡಿಯಾ ಬ್ಲಾಕ್‌ನ ಅರ್ಧ ಡಜನ್ ಸಂಸದರು ಅಪರಾಧಿಗಳಾಗುವ ಸಾಧ್ಯತೆಯಿದೆ. ಒಂದುವೇಳೆ ಉತ್ತರ ಪ್ರದೇಶದ ಸಂಸದರು ತಪ್ಪಿತಸ್ಥರಾದರೆ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಇಂಡಿಯಾ ಬಣಕ್ಕೆ ಹಿನ್ನಡೆಯಾಗಬಹುದು. ಇಂಡಿಯಾ ಬ್ಲಾಕ್‌ನ ಕನಿಷ್ಠ 6 ಮಂದಿ ಹೊಸದಾಗಿ ಚುನಾಯಿತರಾದ ಸಂಸದರು ಮತ್ತು ಇನ್ನೂ ಒಬ್ಬರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದು, ಇದು 2 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಗೆ ಗುರಿಯಾಗಬಹುದು. ಒಂದುವೇಳೆ ಇದೇನಾದರೂ ನಿಜವಾದರೆ ಈ ಸಂಸದರು ಸಂಸತ್ತಿನ ಸದಸ್ಯತ್ವವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಾರೆ.
ಸ್ನೇಹಿತರೇ ಭಾರತದ ಸಂವಿಧಾನದ ಪ್ರಕಾರ ಎರಡು ವರ್ಷ ಶಿಕ್ಷೆ ಅನುಭವಿಸುತ್ತಿರುವವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಒಂದು ವೇಳೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿ ಗೆದ್ದ ಅಭ್ಯರ್ಥಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷೆಯಾದರೆ, ಅವರ ಸದಸ್ಯತ್ವ ಕೂಡ ರದ್ದಾಗುತ್ತದೆ. ಇದೇ ನಿಯಮದನ್ವಯ ಈಗ ಉತ್ತರಪ್ರದೇಶದ ಅರ್ಧ ಡಜನ್ಗೂ ಹೆಚ್ಚು ನೂತನ ಸಂಸದರು ಸಂಸದ ಸ್ಥಾನದಿಂದ ಅನರ್ಹರಾಗುವ ಭೀತಿಯಲ್ಲಿದ್ದಾರೆ.
ಕೆಲ ಸಂಸದರು ಈಗಾಗಲೇ ಶಿಕ್ಷೆಗೆ ಗುರಿಯಾಗಿದ್ದು, ಇನ್ನೂ ಕೆಲವರು ನ್ಯಾಯಾಲಯ ನೀಡಿರುವ ಶಿಕ್ಷೆ ಹೈಕೋರ್ಟ್ನಿಂದ ತಡೆಯಾಜ್ಞೆ ತಂದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ. ಒಂದಿಷ್ಟು ಸಂಸದರ ತೀವ್ರ ಸ್ವರೂಪದ ಪ್ರಕರಣಗಳನ್ನು ಎದುರಿಸುತ್ತಿದ್ದು, ಲೋಕಸಭಾ ಸಂಸದ ಸ್ಥಾನವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ದಕ್ಷಿಣ ಭಾರತದ ರಾಜಕಾರಣಿಗಳಿಗೂ ಹಾಗೂ ಉತ್ತರ ಭಾರತ ರಾಜಕಾರಣಿಗೂ ಭಾರೀ ವ್ಯಾತ್ಯಾಸ ಇರುತ್ತದೆ. ದಕ್ಷಿಣ ಭಾರತದ ರಾಜಕಾರಣಿಗಳು ಶಿಕ್ಷಣವಂತರು, ಬುದ್ಧಿವಂತರು ಆಗಿರುತ್ತಾರೆ. ಆದರೆ, ಬಿಹಾರ, ಉತ್ತರ ಪ್ರದೇಶದಂತಹ ಉತ್ತರ ಭಾರತದ ರಾಜ್ಯಗಳ ರಾಜಕೀಯ ನಾಯಕರನ್ನು ಗಮನಿಸಿದರೆ, ಶೇ.90ರಷ್ಟು ಮಂದಿ ಕ್ರಿಮಿನಲ್ ಪ್ರಕರಣ ಹಿನ್ನಲೆಯವರೇ ಇರ್ತಾರೆ. ಆದರೆ, ಕರ್ನಾಟಕ, ಕೇರಳ, ತಮಿಳುನಾಡಿನಂತಹ ರಾಜ್ಯಗಳಲ್ಲಿ ಇಂತವರ ಸಂಖ್ಯೆ ತುಂಬಾ ಕಡಿಮೆ. ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳಲ್ಲಿ ಪಾತಕಿಗಳು, ಆರೋಪಿಗಳೇ ಗೆದ್ದು ಬರುತ್ತಿದ್ದ ದಿನಗಳನ್ನು ನಾವು ನೋಡಿದ್ದೇವೆ. ಆದರೀಗ ಆ ರಾಜ್ಯಗಳು ಒಂದಿಷ್ಟು ಸುಧಾರಣೆ ಕಂಡಿದ್ದು, ಕ್ರಿಮಿನಲ್ ಹಿನ್ನಲೆಯುಳ್ಳ ರಾಜಕಾರಣಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ, ಈಗಲೂ ಒಂದಿಷ್ಟು ಆರೋಪಿಗಳು ಜೈಲಿನಲ್ಲಿದ್ದು ಚುನಾವಣೆಗೆ ಸ್ಪರ್ಧಿಸಿ, ಗೆಲುವು ಸಾಧಿಸುತ್ತಿದ್ದಾರೆ. ಇದಕ್ಕೆ ಕಾರಣವೇ ಹೆದರಿಕೆ ಹಾಗೂ ಕ್ರಿಮಿನಲ್ ರಾಜಕಾರಣಿಗಳಿಗೆ ಬೆಂಬಲಿಸುತ್ತಿರುವುದು.
ರಾಜಕಾರಣವು ಆಪರಾಧಿಗಳಿಂದ ತುಂಬಿ ಹೋಗುತ್ತೆ ಅನ್ನೋ ಕಾರಣಕ್ಕೆ ಒಂದಿಷ್ಟು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಶಿಕ್ಷೆಗೊಳಗಾದ ಸದಸ್ಯತ್ವ ರದ್ದತಿಯ ಬಗ್ಗೆ 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 ಹೇಳುತ್ತದೆ. ಈ ಸೆಕ್ಷನ್ ಪ್ರಕಾರ ಯಾರಾದರೂ ಲೋಕಸಭಾ ಸಂಸದ, ಶಾಸಕ ಎರಡು ವರ್ಷಕ್ಕಿಂತ ಹೆಚ್ಚು ನ್ಯಾಯಾಲಯದಿಂದ ಶಿಕ್ಷೆಗೊಳಪಟ್ಟರೆ ಆತನ ಸದಸ್ಯತ್ವ ರದ್ದಾಗುತ್ತದೆ. ಒಂದು ವೇಳೆ ಕೆಳಹಂತದ ನ್ಯಾಯಾಲಯದ ತೀರ್ಪಿ ವಿರುದ್ಧ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತಂದು ರಾಜಕೀಯದಲ್ಲಿ ಮುಂದುವರಿಯುತ್ತಾರೆ.
ಕೋಲಾರದಲ್ಲಿ ನಡೆದ ರ್ಯಾಲಿ ವೇಳೆ ಮೋದಿ ಉಪನಾಮ ಬಳಕೆ ಮಾಡಿದ ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲಾಗಿತ್ತು. ಈ ಪ್ರಕರಣದಲ್ಲಿ ರಾಹುಲ್ ಸಂಸದ ಸ್ಥಾನವನ್ನು ಕಳೆದುಕೊಂಡಿದ್ದರು. ಆದರೆ, ಕೆಲಹಂತದ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ಸಿಕ್ಕ ಕಾರಣ ಕಳೆದುಕೊಳ್ಳಬೇಕಾದ ಸಂಸದ ಸ್ಥಾನ ಮತ್ತೆ ಅವರಿಗೆ ರಾಹುಲ್ಗೆ ಸಿಕ್ಕಿತ್ತು.
ಹೀಗೆ ಉತ್ತರ ಪ್ರದೇಶದಲ್ಲೂ ಸುಮಾರು 7 ಸಂಸದರು ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇಂಡಿಯಾ ಬ್ಲಾಕ್‌ನ ಕನಿಷ್ಠ 6 ಮಂದಿ ಹೊಸದಾಗಿ ಚುನಾಯಿತರಾದ ಸಂಸದರು ಮತ್ತು ಇನ್ನೂ ಒಬ್ಬರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದು, ಇದು 2 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಗೆ ಗುರಿಯಾಗಬಹುದು.
ಘಾಜಿಪುರ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಅಫ್ಜಲ್ ಅನ್ಸಾರಿ ಈಗಾಗಲೇ ವಂಚನೆ ಕೃತ್ಯ ಪ್ರಕರಣದಲ್ಲಿ 4 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ. ಕಳೆದ ತಿಂಗಳು ಅವರ ಶಿಕ್ಷೆಗೆ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ ನೀಡಿತು. ಇದರಿಂದಾಗಿ ಕೋರ್ಟ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತ್ತು. ಬೇಸಿಗೆ ರಜೆಯ ನಂತರ ನ್ಯಾಯಾಲಯವು ಪುನರಾರಂಭಗೊಂಡಾಗ ಈ ಪ್ರಕರಣದ ವಿಚಾರಣೆಯನ್ನು ಜುಲೈನಲ್ಲಿ ನಿಗದಿಪಡಿಸಿದೆ. ಅಂತಿಮವಾಗಿ ನ್ಯಾಯಾಲಯ ಶಿಕ್ಷೆಯನ್ನು ಎತ್ತಿ ಹಿಡಿದರೆ, ಅನ್ಸಾರಿ ಅವರು ತಮ್ಮ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ.
ಅಜಂಗಢ ಕ್ಷೇತ್ರದಿಂದ ಗೆದ್ದಿರುವ ಧರ್ಮೇಂದ್ರ ಯಾದವ್ ವಿರುದ್ಧವೂ 4 ಪ್ರಕರಣಗಳು ಬಾಕಿ ಉಳಿದಿವೆ. ಅವರು 2 ವರ್ಷಗಳಿಗಿಂತ ಹೆಚ್ಚು ಕಾಲ ಶಿಕ್ಷೆಗೊಳಗಾದರೆ ಅವರು ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಬಾಬು ಸಿಂಗ್ ಕುಶ್ವಾಹಾ ಅವರು 10 ವರ್ಷಗಳ ರಾಜಕೀಯ ವನವಾಸ ನಂತರ ಜೌನ್‌ಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಮಾಯಾವತಿ ಆಡಳಿತದಲ್ಲಿ ನಡೆದ NRHM ಹಗರಣಕ್ಕೆ ಸಂಬಂಧಿಸಿದ ಹಲವಾರು ಪ್ರಕರಣಗಳನ್ನು ಅವರು ಎದುರಿಸುತ್ತಿದ್ದಾರೆ. ಅವರ ವಿರುದ್ಧ ದಾಖಲಾಗಿರುವ 25 ಪ್ರಕರಣಗಳ ಪೈಕಿ ಎಂಟು ಪ್ರಕರಣಗಳಲ್ಲಿ ಆರೋಪಗಳನ್ನು ಹೊರಿಸಲಾಗಿದೆ.
ಸುಲ್ತಾನ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ಮೇನಕಾ ಗಾಂಧಿ ಅವರನ್ನು ಸೋಲಿಸಿರುವ ರಾಂಭುವಲ್ ನಿಶಾದ್ ವಿರುದ್ಧ ದರೋಡೆಕೋರ ಕಾಯ್ದೆಯಡಿ ಸೇರಿದಂತೆ ಎಂಟು ಪ್ರಕರಣಗಳಿವೆ. ಅವರ ಲೋಕಸಭಾ ಸದಸ್ಯತ್ವದ ಮೇಲೆ ಪರಿಣಾಮ ಬೀರಬಹುದು.
ಚಂದೌಲಿ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಮಹೇಂದ್ರ ನಾಥ್ ಪಾಂಡೆ ಅವರನ್ನು ಸೋಲಿಸಿದ ವೀರೇಂದ್ರ ಸಿಂಗ್, ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಮತ್ತೊಬ್ಬ ಎಸ್‌ಪಿ ಅಭ್ಯರ್ಥಿ. ಸಹರಾನ್‌ಪುರ ಕ್ಷೇತ್ರದಿಂದ ಗೆದ್ದಿರುವ ಕಾಂಗ್ರೆಸ್‌ನ ಇಮ್ರಾನ್ ಮಸೂದ್ ವಿರುದ್ಧ 8 ಪ್ರಕರಣಗಳು ದಾಖಲಾಗಿವೆ. ಇಡಿಯಿಂದ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣಗಳು ಸೇರಿವೆ. ಅವರ ವಿರುದ್ಧ 2 ಪ್ರಕರಣಗಳಲ್ಲಿ ಆರೋಪಗಳನ್ನು ಹೊರಿಸಲಾಗಿದೆ.
ನಗೀನಾ ಮೀಸಲು ಸ್ಥಾನವನ್ನು ಗೆದ್ದಿರುವ ಆಜಾದ್ ಸಮಾಜ ಪಕ್ಷದ ಏಳನೇ ಅಭ್ಯರ್ಥಿ ಚಂದ್ರಶೇಖರ್ ಆಜಾದ್ ಅವರ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಯಾವುದಾದರೂ ಒಂದು ಪ್ರಕರಣದಲ್ಲಿ 2 ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ, ಅವರ ರಾಜಕೀಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ನಂತರ ಹಲವಾರು ರಾಜಕೀಯ ನಾಯಕರು ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿರುವ ಉದಾಹರಣೆಗಳಿವೆ. ಮೊಹಮ್ಮದ್ ಅಜಂ ಖಾನ್, ಅವರ ಪುತ್ರ ಎಸ್‌ಪಿಯ ಅಬ್ದುಲ್ಲಾ ಅಜಮ್, ಖಬೂ ತಿವಾರಿ, ವಿಕ್ರಮ್ ಸೈನಿ, ರಾಮ್ ದುಲಾರ್ ಗೊಂಡ್, ಕುಲದೀಪ್ ಸೆಂಗರ್ ಮತ್ತು ಅಶೋಕ್ ಚಂದೇಲ್ ಅವರು ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ.
ಒಟ್ನಲ್ಲಿ ಮೋದಿ ಅಲೆಯ ವಿರುದ್ಧ ಹೋರಾಡಿ 37 ಸ್ಥಾನಗಳನ್ನು ಗೆದ್ದಿರುವ ಸಮಾಜವಾದಿ ಪಕ್ಷಕ್ಕೆ ಇದೀಗ 7ಸ್ಥಾನಗಳನ್ನು ಕಳೆದುಕೊಳ್ಳುವ ಭೀತಿ ಹೆಚ್ಚಿದೆ. ನಿಜಕ್ಕೂ ಈ 7 ಸ್ಥಾನಗಳನ್ನು ಕಳೆದಕೊಂಡರೆ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಹಿನ್ನಡೆಯಾಗುವುದಂತೂ ಸುಳ್ಳಲ್ಲ.