ಬಿಹಾರದಲ್ಲಿ ರಾಜಕೀಯ ಪೈಪೋಟಿಯ ಶಿಖರವನ್ನೇ ತಲುಪಿರುವ ವಿಧಾನಸಭಾ ಚುನಾವಣೆಗೆ ಈಗ ಕ್ಷಣಗಣನೆ ಆರಂಭವಾಗಿದೆ. ಭಾರೀ ಕುತೂಹಲಕ್ಕೆ ಕಾರಣವಾದ ಈ ಚುನಾವಣೆಯ ಮೊದಲ ಹಂತದ ಮತದಾನ ನವೆಂಬರ್ 6ರಂದು ನಡೆಯಲಿದ್ದು, ಎರಡನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಇದೀಗ ಮೊದಲ ಹಂತದ ಚುನಾವಣೆಯ ಪ್ರಚಾರ ಕಾರ್ಯಕ್ಕೆ ತೆರೆಬಿದ್ದಿದೆ. ಎಲ್ಲ ಪಕ್ಷಗಳ ನಾಯಕರು ತಮ್ಮ ಅಂತಿಮ ಪ್ರಚಾರ ಯತ್ನವನ್ನು ಪೂರ್ಣಗೊಳಿಸಿದ್ದು, ಮತದಾರರ ಮನ ಗೆಲ್ಲಲು ಎಲ್ಲಾ ತಂತ್ರಗಳನ್ನು ಬಳಸಿಕೊಂಡಿದ್ದಾರೆ. ಎರಡನೇ ಹಂತದ ಮತದಾನ ಮುಗಿದ ತಕ್ಷಣ ಎಕ್ಸಿಟ್ ಪೋಲ್‌ಗಳು ಹೊರಬೀಳಲಿವೆ. ಕಳೆದ ಕೆಲವು ಬಾರಿ ಎಕ್ಸಿಟ್ ಪೋಲ್‌ಗಳು ನಿಖರ ಫಲಿತಾಂಶ ನೀಡದಿದ್ದರೂ, ಈ ಬಾರಿ ಬಿಹಾರ ಚುನಾವಣೆಯ ಕುರಿತ ಕುತೂಹಲ ಜನರಲ್ಲೂ ಹೆಚ್ಚಾಗಿದೆ.
ಇದಕ್ಕೆ ಮುನ್ನವೇ ಪ್ರಕಟವಾದ ಹಲವು ಸಮೀಕ್ಷೆಗಳ ಪ್ರಕಾರ, ಬಿಜೆಪಿ–ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರಬಹುದು ಎಂಬ ಅಂದಾಜು ವ್ಯಕ್ತವಾಗಿದೆ. ಮೊದಲ ಹಂತದಲ್ಲಿ 121 ಮತ್ತು ಎರಡನೇ ಹಂತದಲ್ಲಿ 122 ಸ್ಥಾನಗಳಿಗೆ ಮತದಾನ ನಡೆಯಲಿದೆ. ಒಟ್ಟು 243 ಸ್ಥಾನಗಳಲ್ಲಿ ಸರಳ ಬಹುಮತಕ್ಕೆ ಅಗತ್ಯವಿರುವ ಸಂಖ್ಯೆ 122. ಈ ಬಾರಿ ಬಿಜೆಪಿ ಮತ್ತು ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಚಿರಾಗ್ ಪಾಸ್ವಾನ್ ಅವರ ಲೋಜಪಾ ಪಕ್ಷವು 28 ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ವಿರೋಧಪಕ್ಷದ ಮಹಾಘಟಬಂಧನ್ ಮೈತ್ರಿಕೂಟದಲ್ಲಿ, ಆರ್‌ಜೆಡಿ 143, ಕಾಂಗ್ರೆಸ್ 61 ಸ್ಥಾನಗಳಲ್ಲಿ ಹಾಗೂ ಎಡಪಕ್ಷಗಳು ಉಳಿದ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ.
ಇದೀಗ ಸಮೀಕ್ಷೆಗಳ ಫಲಿತಾಂಶಕ್ಕೆ ಬರೋಣ—
Polstrat–Peoples Insight Survey ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 133 ರಿಂದ 143 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಅದೇ ವೇಳೆ, ಮಹಾಘಟಬಂಧನ್ ಮೈತ್ರಿಕೂಟಕ್ಕೆ 93 ರಿಂದ 102 ಸ್ಥಾನಗಳು ಸಿಗುವ ಅಂದಾಜು. ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಾರ್ಟಿಗೆ 1 ರಿಂದ 3 ಸ್ಥಾನಗಳು ಮತ್ತು ಓವೈಸಿ ನೇತೃತ್ವದ AIMIM ಪಾರ್ಟಿಗೆ 2 ರಿಂದ 3 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದೆ.
ವೋಟ್ ಶೇರ್‌ಗೂ ಪ್ರಕಾರ, ಎನ್‌ಡಿಎ ಮೈತ್ರಿಕೂಟಕ್ಕೆ ಶೇ.45 ಮತಗಳು, ಮಹಾಘಟಬಂಧನ್‌ಗೆ ಶೇ.39 ಹಾಗೂ ಇತರರಿಗೆ ಶೇ.16 ವೋಟ್ ಶೇರ್ ಸಿಗಬಹುದು ಎಂದು ವರದಿ ಹೇಳುತ್ತದೆ. ಪಕ್ಷವಾರು ಅಂಕಿಅಂಶಗಳನ್ನು ನೋಡಿದರೆ, ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿಗೆ 70 ರಿಂದ 72, ಜೆಡಿಯುಗೆ 53 ರಿಂದ 56, ಎಲ್‌ಜೆಪಿಗೆ 10 ರಿಂದ 12, ಉಳಿದ ಮೈತ್ರಿಕೂಟದ ಸಹಪಕ್ಷಗಳಿಗೆ 1–2 ಸ್ಥಾನಗಳು ಸಿಗುವ ಸಾಧ್ಯತೆ ಇದೆ.
ಮಹಾಘಟಬಂಧನ್ ಪಾಳಯದಲ್ಲಿ ಆರ್‌ಜೆಡಿಗೆ 69 ರಿಂದ 72, ಕಾಂಗ್ರೆಸ್‌ಗೆ 10 ರಿಂದ 13, ಎಡಪಕ್ಷಗಳಿಗೆ 14 ರಿಂದ 15, ಇತರರಿಗೆ 4–5 ಸ್ಥಾನಗಳ ಅಂದಾಜು ಇದೆ. ಮತ್ತೊಂದು ಸಮೀಕ್ಷೆ ಆಗಿರುವ ಚಾಣಾಕ್ಯ ಸ್ಟ್ರಾಟಜೀಸ್ ಸರ್ವೇ ಕೂಡ ಎನ್‌ಡಿಎ ಪರವಾಗಿ ಅಂದಾಜು ನೀಡಿದೆ. ಇದರ ಪ್ರಕಾರ, ಎನ್‌ಡಿಎ ಮೈತ್ರಿಕೂಟವು 128 ರಿಂದ 134 ಸ್ಥಾನಗಳನ್ನು ಗೆಲ್ಲಬಹುದು. ಮಹಾಘಟಬಂಧನ್ ಮೈತ್ರಿಕೂಟಕ್ಕೆ 102 ರಿಂದ 108 ಸ್ಥಾನಗಳು ಸಿಗಬಹುದು ಎಂದು ವರದಿ ಹೇಳುತ್ತದೆ. ಉಳಿದ ಜನ ಸುರಾಜ್, AIMIM ಮತ್ತು ಇತರ ಸಣ್ಣ ಪಕ್ಷಗಳು ಸೇರಿ 5 ರಿಂದ 10 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ಎಲ್ಲಾ ಸಮೀಕ್ಷೆಗಳಲ್ಲಿಯೂ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಮುನ್ನಡೆ ತೋರುತ್ತಿದ್ದು, ನವೆಂಬರ್ 14ರಂದು ಬರುವ ನಿಜವಾದ ಫಲಿತಾಂಶವೇ ಜನರ ಅಭಿಪ್ರಾಯವನ್ನು ದೃಢಪಡಿಸಲಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

