Political News: ಪ್ರಧಾನಿ ಮೋದಿ ಅತೀ ಹೆಚ್ಚು ದಿನ ಪ್ರಧಾನಿಯಾಗಿ ದಾಖಲೆ ಬರೆದಿದ್ದು, ನಿನ್ನೆ ಬಿಜೆಪಿಗರು ಈ ಬಗ್ಗೆ ಸಂಭ್ರಮಾಚರಣೆ ಮಾಡಿದರು. ಬಿಜೆಪಿ ನಾಯಕರು ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಹೆಸರಲ್ಲಿ ಅರ್ಚನೆ, ಪೂಜೆ ಮಾಡಿಸಿದರು.
ಆದರೆ ಬಿಜೆಪಿಗರು ಅರ್ಧ ಸತ್ಯ ಹೇಳುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ದೇಶದ ಪ್ರಥಮ ಪ್ರಧಾನಿ ನೆಹರೂ ಏರಿದ ಸ್ಥಾನವನ್ನು ಏರಲು ಸಾಧ್ಯವೂ ಇಲ್ಲ, ನೆಹರೂ ಅವರು ಇಳಿದ ಜ್ಞಾನದ ಆಳಕ್ಕೆ ಇಳಿಯಲೂ ಸಾಧ್ಯವಿಲ್ಲ. ಬಿಜೆಪಿ ಪಕ್ಷದವರು ಇತಿಹಾಸವನ್ನು ತಿರಚಬಹುದೇ ಹೊರತು ಬದಲಾಯಿಸಲು ಸಾಧ್ಯವಿಲ್ಲ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದಿದ್ದಾರೆ.
ಪಂಡಿತ್ ನೆಹರೂ ಅವರಿಗಿಂತಲೂ ಹೆಚ್ಚಿನ ದಿನಗಳ ಕಾಲ ಪ್ರಧಾನಿ ಹುದ್ದೆಯಲ್ಲಿ ನರೇಂದ್ರ ಮೋದಿ ಆಡಳಿತ ನಡೆಸಿದ್ದಾರೆ ಎಂದು ಅರ್ಧ ಸತ್ಯವನ್ನು ಹೇಳುವ ಮೂಲಕ ಇತಿಹಾಸವನ್ನೇ ತಿರುಚಲು ಬಿಜೆಪಿ ಹತಾಷೆ ಪ್ರಯತ್ನ ನಡೆಸಿದೆ. ನೆಹರೂ ಅವರು ಈ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ ಕಾಲಾವಧಿ 16 ವರ್ಷ, 286 ದಿನಗಳು, ಈಗಿನ ಪ್ರಧಾನಿಗಳ ಆಡಳಿತಾವಧಿ ಕೇವಲ 12 ವರ್ಷ ಮಾತ್ರ…! ಬಿಜೆಪಿ ಯಾವ ದಾಖಲೆಯ ಬಗ್ಗೆ ಮಾತಾಡುತ್ತಿದೆ?
ನೆಹರು ಅವರು 1952ರ ಚುನಾವಣೆಯ ನಂತರವೇ ಪ್ರಧಾನಮಂತ್ರಿಯಾದರು ಎಂದು ಬಿಜೆಪಿ ಹೊಸ ಇತಿಹಾಸವನ್ನು ಬರೆಯಲು ಹೊರಟಿದೆ. ಹಾಗಿದ್ದರೆ 1947ರಿಂದ 1950ರವರೆಗೆ ಸರ್ಧಾರ್ ಪಟೇಲ್ ಅವರು ಉಪಪ್ರಧಾನಿ ಮತ್ತು ಗೃಹಮಂತ್ರಿಯಾಗಿದ್ದುನ್ನೂ ಬಿಜೆಪಿ ಪಕ್ಷ ನಿರಾಕರಿಸುತ್ತಿದೆಯೆ? ಅಥವಾ ನೆಹರೂ ಅವರಂತೆ ವಿವಿಧತೆಯಲ್ಲಿ ಏಕತೆ ಪ್ರತಿಪಾದಿಸಿದ ಪಟೇಲ್ ಅವರನ್ನೂ ಅವಮಾನಿಸುತ್ತಿದೆಯೇ? ಎಂದು ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಸ್ವಾತಂತ್ರ್ಯ ಬಂದ ದಿನದಿಂದಲೇ ದೇಶಕ್ಕೆ ಸರ್ಕಾರವಿತ್ತು, ಸಚಿವ ಸಂಪುಟವಿತ್ತು, ಪ್ರಧಾನಮಂತ್ರಿಯೂ ಇದ್ದರೂ ಎಂಬುದು ಶಾಲಾ ಮಕ್ಕಳಿಗೂ ಗೊತ್ತಿರುವ ಇತಿಹಾಸ. ಆದರೆ ದೇಶದ ದುರಂತವೇನೆಂದರೆ, ಇತಿಹಾಸವನ್ನು ಅಧ್ಯಯನ ಮಾಡದವರು, ಇತಿಹಾಸವನ್ನು ಅಳಿಸುವ ಮೂಲಕ ವಿಜಯೋತ್ಸವ ಆಚರಿಸುತ್ತಿರುವುದು ಹಾಸ್ಯಾಸ್ಪದ.
ನೆಹರೂ ಅವರ ಆಡಾಳಿತಾವಧಿ ದಿನಗಳನ್ನ ನರೇಂದ್ರ ಮೋದಿಯ ಜೊತೆಗೆ ತಾಳೆ ಮಾಡುತ್ತಿರುವ ಬಿಜೆಪಿ ಪಕ್ಷ, ನೆಹರೂ ಅವರು ಜೈಲಲ್ಲಿ ಕಳೆದ ಬರೋಬ್ಬರಿ 9 ವರ್ಷಗಳು, ಅಂದರೆ ಸುಮಾರು 3,259 ದಿನಗಳನ್ನು ಯಾರೊಂದಿಗೆ ಹೋಲಿಕೆ ಮಾಡುತ್ತೀರಿ? ನರೇಂದ್ರ ಮೋದಿ ಬಿಟ್ಟು ಬಿಡಿ ಇಡೀ ಸಂಘಪರಿವಾರದಲ್ಲೇ ನೆಹರೂ ಅವರಂತೆ ಜೈಲುವಾಸ ಅನುಭವಿಸಿದ ಒಬ್ಬ ವ್ಯಕ್ತಿಯನ್ನು ತೋರಿಸಲು ಸಾಧ್ಯವೇ?
ದೇಶ ವಿಭಜನೆಯಿಂದ ಉಂಟಾದ ಹಿಂಸಾಚಾರ, ನಿರಾಶ್ರಿತರ ಸಮಸ್ಯೆ, ಬಡತನ, ಅನಕ್ಷರತೆ, ಕೈಗಾರಿಕೆಗಳ ಕೊರತೆ ಹಾಗೂ ದುರ್ಬಲ ಆರ್ಥಿಕ ವ್ಯವಸ್ಥೆ ಭಾರತವನ್ನು ವೈಜ್ಞಾನಿಕ ತಳಹದಿಯ ಮೇಲೆ ಸಂವಿಧಾನ ಪ್ರಜಾಪ್ರಭುತ್ವ, ಸಮಾಜವಾದದ ಅಡಿಪಾಯಗಳೊಂದಿಗೆ ನವ ಭಾರತ ನಿರ್ಮಾಣ ಮಾಡಿದ ನೆಹರೂ ಅವರಿಗೆ ಸರಿಸಾಟಿಯಾಗಲು ಸಾಧ್ಯವೇ? ದೇಶ ಕಟ್ಟಿದವರಿಗೂ, ದೇಶ ಮಾರುತ್ತಿರುವವರಿಗೂ ಎತ್ತಿಂದೆತ್ತಣ ಸಂಬಂಧ.
ಇತಿಹಾಸವನ್ನು ಕೊಲ್ಲುವವರು ಭವಿಷ್ಯವನ್ನು ಕಟ್ಟಲಾರರು. ಸುಳ್ಳಿನ ವಿಜಯೋತ್ಸವಗಳು ಕ್ಷಣಿಕವಾಗಿರಬಹುದು; ಆದರೆ ಸತ್ಯದ ಮುಂದೆ ಅವುಗಳ ಆಯುಷ್ಯ ಅತ್ಯಂತ ಕಡಿಮೆ ಎಂದು ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.




