Tuesday, October 7, 2025

Latest Posts

ಬಿಹಾರ ಸೀಟು ಹಂಚಿಕೆ ಶೀಘ್ರದಲ್ಲೇ : ಯಾದವ್ ನಿವಾಸದಲ್ಲಿ ರಹಸ್ಯ ಸಭೆ!

- Advertisement -

ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆ ಸನ್ನಿಹಿತವಾಗುತ್ತಿದ್ದಂತೆ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇಂಡಿಯಾ ಮೈತ್ರಿಕೂಟದ ಪಕ್ಷಗಳು ಶನಿವಾರ ರಾತ್ರಿ ಸಭೆ ಸೇರಿ, ಸೀಟು ಹಂಚಿಕೆ ಸೂತ್ರವನ್ನು ಒಂದೆರಡು ದಿನಗಳಲ್ಲಿ ಬಹಿರಂಗಪಡಿಸುವ ನಿರ್ಧಾರ ಕೈಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಈ ಮಹತ್ವದ ಸಭೆ, ಇಂಡಿಯಾ ಬಣದ ಸಹಕಾರ ಸಮಿತಿಯ ಮುಖ್ಯಸ್ಥ ಮತ್ತು ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ ಅವರ ನಿವಾಸದಲ್ಲಿ ರಾತ್ರಿವರೆಗೂ ನಡೆಯಿತು. ಸಭೆ ಬಳಿಕ ವಿಕಾಸಶೀಲ್ ಇನ್ಸಾನ್ ಪಕ್ಷದ ಅಧ್ಯಕ್ಷ ಮುಕೇಶ್ ಸಾಹ್ನಿ ಹೇಳಿದರು. ಎಲ್ಲ ವಿಚಾರಗಳು ಅಂತಿಮಗೊಂಡಿವೆ. ಆದರೆ ಈಗಲೇ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ, ಮುಂದಿನ ಪತ್ರಿಕಾಗೋಷ್ಠಿಯಲ್ಲಿ ಎಲ್ಲವನ್ನೂ ಪ್ರಕಟಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

2020ರ ಚುನಾವಣೆಯಲ್ಲಿ ಸೋತಿದ್ದರೂ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಸಾಹ್ನಿ, 2024ರ ಲೋಕಸಭೆ ಚುನಾವಣೆಯ ಮುನ್ನ ಎನ್‌ಡಿಎ ಬಿಟ್ಟು ಇಂಡಿಯಾ ಬಣಕ್ಕೆ ಸೇರಿದ್ದರು. ಆರ್‌ಜೆಡಿ ಕಾರ್ಯದರ್ಶಿ ಅಲೋಕ್ ಮೆಹ್ರಾ ಅವರು ಕೆಲವು ವಿಚಾರಗಳು ಇತ್ಯರ್ಥಗೊಳ್ಳಬೇಕಿದೆ, ಆದರೆ ಇನ್ನೆರಡು ದಿನಗಳಲ್ಲಿ ಎಲ್ಲಾ ಸ್ಪಷ್ಟವಾಗಲಿದೆ ಎಂದಿದ್ದಾರೆ.

ಈ ನಡುವೆ, ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ತಂಡ ಬಿಹಾರದಲ್ಲಿ ಚುನಾವಣಾ ಸಿದ್ಧತೆ ಪರಿಶೀಲನೆ ನಡೆಸಿದ್ದು, ಪ್ರಸ್ತುತ ಸರ್ಕಾರದ ಅವಧಿ ನವೆಂಬರ್ 22ರೊಳಗೆ ಮುಗಿಯುವ ಹಿನ್ನೆಲೆಯಲ್ಲಿ ಎಲ್ಲಾ ಚುನಾವಣಾ ಪ್ರಕ್ರಿಯೆಗಳು ಆ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ತಿಳಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss