Tuesday, July 15, 2025

Latest Posts

ಸೆಪ್ಟೆಂಬರ್‌ ಕ್ರಾಂತಿ ಆಗೇ ಆಗುತ್ತೆ, ಬಿಜೆಪಿ- ಜೆಡಿಎಸ್‌ ಶಾಸಕರು “ಕೈ” ಹಿಡೀತಾರೆ! : ರಾಜಣ್ಣ ಹೊಸ ಬಾಂಬ್

- Advertisement -

ಬೆಂಗಳೂರು : ಇಷ್ಟು ದಿನಗಳ ಕಾಲ ಸೆಪ್ಟೆಂಬರ್‌ ಕ್ರಾಂತಿಯ ಹೇಳಿಕೆಯಿಂದ ಸಚಿವ ಕೆ.ಎನ್.‌ ರಾಜಣ್ಣ ಸುದ್ದಿಯಲ್ಲಿದ್ದರು. ಆದರೆ ಇದೀಗ ಮತ್ತೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಗುಂಪೊಂದು ಕಾಂಗ್ರೆಸ್ ಸೇರಲು ಮುಂದಾಗಿದೆ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಕಾಂಗ್ರೆಸ್ ಶಾಸಕರ ಬದಲಿಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಶಾಸಕರ ದೊಡ್ಡ ಗುಂಪು ಕಾಂಗ್ರೆಸ್ ಸೇರಲು ಮುಂದಾಗಿದೆ. ಈ ಬಗ್ಗೆ ಈಗಲ್ಲ, ಸೂಕ್ತ ಸಮಯದಲ್ಲಿ ವಿವರವಾಗಿ ಮಾಹಿತಿ ನೀಡುತ್ತೇನೆಂದು ಹೊಸ ಬಾಂಬ್‌ ಸಿಡಿಸಿದ್ದಾರೆ.

ನಾಯಕತ್ವ ಬದಲಾವಣೆ ವಿಚಾರವಾಗಿ ಆಗಾಗ್ಗೆ ಚರ್ಚೆಗಳು ಶುರುವಾದಾಗ ಸಿದ್ದರಾಮಯ್ಯ ಸುಮ್ಮನಿದ್ದರು. ಆರಂಭದಲ್ಲಿಯೇ ಅದನ್ನು ಸ್ಪಷ್ಟಪಡಿಸಬಹುದಿತ್ತು. ಆದರೆ, ಸೆಪ್ಟೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ಆಗುವುದು ಖಚಿತ. ನನ್ನ ಹೇಳಿಕೆಗೆ ಈಗಲು ನಾನು ಬದ್ಧ ಎಂದು ಸಚಿವ ರಾಜಣ್ಣ ಪುನರುಚ್ಚರಿಸಿ ಅಚ್ಚರಿ ಮೂಡಿಸಿದ್ದಾರೆ.

ಇನ್ನೂ ಪ್ರಮುಖವಾಗಿ ಸಚಿವ ರಾಜಣ್ಣ ಅವರ ಹೇಳಿಕೆ ಬರುವ ಮುನ್ನ ಕಾಂಗ್ರೆಸ್‌ ಶಾಸಕ ವಿಜಯಾನಂದ ಕಾಶಪ್ಪನವರ್‌, ಬಿಜೆಪಿಯವರು ಕಾಂಗ್ರೆಸ್​​ನ 55 ಶಾಸಕರನ್ನು ಪಟ್ಟಿ ಮಾಡಿದ್ದಾರೆ. ಬಿಜೆಪಿ ಏಜೆಂಟ್​ಗಳನ್ನು ಅವರ ಮನೆಗೆ ಕಳುಹಿಸಿ ಹೆದರಿಸಿದ್ದಾರೆ. ಬಿಜೆಪಿಗೆ ಬರದೇ ಹೋದ್ರೆ ಸಿಬಿಐ, ಇಡಿ ದಾಳಿ ಮಾಡಿಸಿ ಅಕ್ರಮ ಆಸ್ತಿ ಹೊರಗೆಳಸ್ತೀವಿ ಅಂತಾರೆ, ಇದಕ್ಕೆ ನಾನು ಜಗ್ಗೋದಿಲ್ಲ, ಬಗ್ಗೋದಿಲ್ಲ, ಆ ಲಿಸ್ಟ್​​ನಲ್ಲಿ ನಾನು ಇದ್ದರೂ ಇರಬಹುದು ಎಂದು ಶಾಕಿಂಗ್‌ ಹೇಳಿಕೆ ನೀಡಿದ್ದರು.

ನಾನು ಅದಕ್ಕೆ ಭಯಪಟ್ಟಿಲ್ಲ, ಅವರು ಮಾಡುತ್ತಿದ್ದಾರೆ. ಮೊನ್ನೆ ನೋಡಿರಬಹುದು ನಮ್ಮ ಬಳ್ಳಾರಿ ಶಾಸಕರು, ಭರತ ರೆಡ್ಡಿ, ಸಂಸದ ತುಕಾರಾಮ್, ನಾಗೇಂದ್ರ ಅವರ ಮೇಲೆ ದಾಳಿ ಮಾಡಿದರು. ಇವೆಲ್ಲ ಉದ್ದೇಶಪೂರ್ವಕ ದ್ವೇಷದ ರಾಜಕಾರಣ, ಕುತಂತ್ರ ರಾಜಕಾರಣ. ಬಿಜೆಪಿಯವರಿಗೆ ತಾಕತ್, ಧಮ್ ಇದ್ರೆ ಜನರ ಮಧ್ಯೆ ಬರಲಿ. 2028ಕ್ಕೆ ಚುನಾವಣೆ ಆಗಲಿ ಎಂದು ತಿರುಗೇಟು ನೀಡಿದ್ದರು.

ನಾವಿಲ್ಲಿ ಸೂಕ್ಷ್ಮವಾಗಿ ಈ ಇಬ್ಬರು ನಾಯಕರ ಹೇಳಿಕೆಗಳನ್ನು ಗಮನಿಸಿದಾಗ ಕಾಂಗ್ರೆಸ್‌ ಪಕ್ಷದಲ್ಲಿ ಒಳಗೊಳಗೆ ಗುಪ್ತ ಚಟುವಟಿಕೆಗಳು ನಡೆಯುತ್ತಿವೆಯಾ ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಒಂದೇ ಪಕ್ಷದ ಸಚಿವ, ಶಾಸಕರು ಆಪರೇಷನ್‌ ಬಗ್ಗೆ ಭಿನ್ನವಾದ ಹೇಳಿಕೆಗಳನ್ನು ನೀಡುತ್ತಿರುವುದರ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಹಿರಿಯ ಸಚಿವ ರಾಜಣ್ಣ ಹೇಳಿದಂತೆ ಕೈ ಪಾಳಯದಲ್ಲಿ ತಳಮಳಗಳು ಜೋರಾಗಿವೆಯಾ ಎನ್ನುವ ಅನುಮಾನಗಳು ಮೂಡುತ್ತಿವೆ.

- Advertisement -

Latest Posts

Don't Miss