ಮದ್ದೂರಿನಲ್ಲಿ ಹಿಂದೂಗಳು ಕಹಳೆ ಮೊಳಗಿಸಿದ್ದಾರೆ. ಹಿಂದೂ ಸಂಘಟನೆಗಳಿಗೆ ಬಿಜೆಪಿಗರು ಸಾಥ್ ಕೊಟ್ಟಿದ್ದು, ಪಟ್ಟಣಕ್ಕೆ ರಾಜ್ಯ ನಾಯಕರು ಎಂಟ್ರಿ ಕೊಟ್ಟಿದ್ದಾರೆ. ಮದ್ದೂರಿನ ಐಬಿಯಲ್ಲಿ ಬಿಜೆಪಿ ನಾಯಕರು ಮಹತ್ವದ ಮೀಟಿಂಗ್ ಮಾಡಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ, ಎಸ್‌ಪಿಯನ್ನು ಐಬಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಸೆಪ್ಟೆಂಬರ್ 8, 9ರಂದು ಏನಾಯ್ತು. ಇದುವರೆಗೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಅನ್ನೋ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ಬಿ.ವೈ. ವಿಜಯೇಂದ್ರ, ಆರ್. ಅಶೋಕ್ ಸೇರಿ, ಹಲವು ನಾಯಕರು ಹಾಜರಿದ್ರು.
ಮತ್ತೊಂದೆಡೆ, ಕಲ್ಲು ತೂರಾಟ ಪ್ರಕರಣ ಸಂಬಂಧ ಬಿಜೆಪಿ ಸತ್ಯ ಶೋಧನಾ ಸಮಿತಿಯನ್ನು ರಚನೆ ಮಾಡಿದೆ. ಡಾ. ಅಶ್ವತ್ಥ್ ನಾರಾಯಣ್, ನಿವೃತ್ತ ಐಪಿಎಸ್ ಅಧಿಕಾರಿ ಬಾಸ್ಕರ್ ರಾವ್, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ, ವೆಂಕಟೇಶ್ ದೊಡ್ಡೇರಿ, ವಿಜಯ್ ಪ್ರಸಾದ್, ಸ್ವಾಮಿ ಗೌಡ, ಇಂದ್ರೇಶ್‌ರನ್ನ, ಈ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ. ಸದ್ಯ, ಸತ್ಯ ಶೋಧನಾ ಸಮಿತಿ ಸದಸ್ಯರು, ಲಾಠಿಚಾರ್ಜ್‌ನಲ್ಲಿ ಗಾಯಗೊಂಡವರನ್ನು ಭೇಟಿಯಾಗಿ, ಮಾಹಿತಿ ಪಡೆಯುವ ಕೆಲಸ ಮಾಡ್ತಿದ್ದಾರೆ.
ಇನ್ನು, ಮದ್ದೂರಿಗೆ ಬರುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಮದ್ದೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಹಿಂದೂಗಳು ಆತಂಕದಲ್ಲಿದ್ದಾರೆ. ರಾಜ್ಯ ಸರ್ಕಾರದ ಧೋರಣೆ, ನಡೆದಿರುವ ಘಟನೆ, ಹೆಣ್ಮಕ್ಕಳ ಮೇಲಿನ ಲಾಠಿಚಾರ್ಜ್‌ನಿಂದಾಗಿ ಆತಂಕದಲ್ಲಿದ್ದಾರೆ. ಹಿಂದೂ ಸಂಘಟನೆ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಆಗಬೇಕಿದೆ. ಯಾರು ಕಲ್ಲು ಎಸೆದಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ನಾಮಕಾವಸ್ಥೆಯಾಗಿ ಎಫ್‌ಐಆರ್ ಮಾಡಿದ್ದಾರೆ. 1 ತಿಂಗಳು ಆದ್ಮೇಲೆ ಬಿಡುವ ಕೆಲಸವನ್ನು ಇದೇ ಸರ್ಕಾರ ಮಾಡುತ್ತದೆ. ಈ ಸರ್ಕಾರದ ನಡವಳಿಕೆ ಮೇಲೆ ವಿಶ್ವಾಸವೇ ಇಲ್ಲ ಅಂತಾ, ವಾಗ್ದಾಳಿ ನಡೆಸಿದ್ರು.

