ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶಾಸಕಿ ರೇಖಾ ಪಾತ್ರ ಮಾಡಿದ ಕ್ರಮ ಇದೀಗ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಹಸುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ತಡೆದ ರೇಖಾ ಪಾತ್ರ, ಜಾನುವಾರುಗಳ ವಯಸ್ಸು ದೃಢೀಕರಿಸಲು ಅವುಗಳ ಜನನ ಪ್ರಮಾಣ ಪತ್ರ ತೋರಿಸುವಂತೆ ಕೇಳಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಅಕ್ರಮ ಜಾನುವಾರು ಸಾಗಾಟ ಮತ್ತು ಹತ್ಯೆ ತಡೆಯುವ ನಿಟ್ಟಿನಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ, 14 ವರ್ಷದೊಳಗಿನ ಹಸುಗಳನ್ನು ಕೊಲ್ಲಬಾರದು ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದೇ ವಿಚಾರ ಉಲ್ಲೇಖಿಸಿ ರೇಖಾ ಪಾತ್ರ ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಗೆ ಟಿಎಂಸಿ ತೀವ್ರ ಟೀಕೆ ವ್ಯಕ್ತಪಡಿಸಿದ್ದು, “ಬಿಜೆಪಿ ಆಡಳಿತದ ಮತ್ತೊಂದು ರಾಜ್ಯದಿಂದ ಹಸುಗಳ ಜನನ ಪ್ರಮಾಣ ಪತ್ರ ತಂದು ತೋರಿಸಿ” ಎಂದು ವ್ಯಂಗ್ಯವಾಡಿದೆ. ಬಿಜೆಪಿ ನಾಯಕರ ಈ ನಡೆ ಅತಿರೇಕದ ರಾಜಕೀಯ ಎಂದು ಟಿಎಂಸಿ ಆರೋಪಿಸಿದೆ. ಇನ್ನೊಂದೆಡೆ, ಬಿಜೆಪಿ ನಾಯಕರು ಅಕ್ರಮ ಜಾನುವಾರು ಸಾಗಾಟ ತಡೆಯಲು ಕ್ರಮ ಕೈಗೊಳ್ಳುವುದು ತಪ್ಪಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ, ಹಸುಗಳ ಜನನ ಪ್ರಮಾಣ ಪತ್ರ ವಿಚಾರ ಇದೀಗ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಮತ್ತು ಟಿಎಂಸಿ ನಡುವೆ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ.




