ಅಭಿವೃದ್ಧಿ… ಅಭಿವೃದ್ಧಿ ಅಂತ ಭಾಷಣ ಮಾಡೋ ಜನಪ್ರತಿನಿಧಿಗಳ ಮಾತು ಒಂದೆಡೆಯಾದ್ರೆ, ನೆಲದ ವಾಸ್ತವ್ಯ ಇನ್ನೊಂದೇ ಆಗಿದೆ. ಧಾರವಾಡ ಜಿಲ್ಲೆಯ ಮಂಟೂರ್ ಗ್ರಾಮದಲ್ಲಿ ಇಂದಿಗೂ ಸರಿಯಾದ ರಸ್ತೆ ಇಲ್ಲದೆ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಮಳೆಯಾದರೆ ರಸ್ತೆ ಅಲ್ಲ, ಕೆಸರಿನ ಕೆರೆ ಅನ್ನೋ ಸ್ಥಿತಿ ನಿರ್ಮಾಣವಾಗುತ್ತಿದ್ದು, ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ. ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎನ್ನುವ ಆಕ್ರೋಶ ಗ್ರಾಮಸ್ಥರಲ್ಲಿ ಕೇಳಿಬರುತ್ತಿದೆ.
ಇದು ಯಾವದೋ ಕಾಡಿನ ದಾರಿಯಲ್ಲ… ಧಾರವಾಡ ಜಿಲ್ಲೆಯ ಮಂಟೂರ್ ಗ್ರಾಮದ ಮುಖ್ಯ ರಸ್ತೆ. ರಸ್ತೆ ತುಂಬಾ ದೊಡ್ಡ ದೊಡ್ಡ ಗುಂಡಿಗಳು, ಕೆಸರು ಮತ್ತು ಹದಗೆಟ್ಟ ಪರಿಸ್ಥಿತಿಯಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಮಳೆಯಾದರೆ ವಾಹನ ಸವಾರರು ರಸ್ತೆಯಲ್ಲಿ ಹೋಗೋದಕ್ಕೂ ಹೆದರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬೈಕ್ ಸವಾರರು ಪ್ರತಿದಿನ ಜಾರಿ ಬೀಳುತ್ತಿದ್ದು, ಮಕ್ಕಳು ಶಾಲೆಗೆ ಹೋಗಲು ಪರದಾಡುತ್ತಿದ್ದಾರೆ. ಅಭಿವೃದ್ಧಿ ಮಾತು ಕೇಳಿ ಕೇಳಿ ಸುಸ್ತಾಗಿರುವ ಗ್ರಾಮಸ್ಥರು ಈಗ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಗ್ರಾಮದ ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಅಂದ್ರೆ, ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಕೂಡ ಗ್ರಾಮಕ್ಕೆ ಬರಲು ಪರದಾಡುತ್ತಿದೆ. ಗರ್ಭಿಣಿಯರು, ವೃದ್ಧರು ಆಸ್ಪತ್ರೆಗೆ ತೆರಳಲು ನರಕ ಅನುಭವಿಸುತ್ತಿದ್ದಾರೆ. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಕಷ್ಟಪಡುತ್ತಿದ್ದಾರೆ. ಮಳೆಯಾದರೆ ರಸ್ತೆ ಸಂಪೂರ್ಣ ಕೆಸರುಗದ್ದೆಯಾಗುತ್ತಿದ್ದು, ಕೆಲವೊಮ್ಮೆ ಜನರು ಕಾಲ್ನಡಿಗೆಯಲ್ಲೇ ಜಾರಿಬೀಳುವ ಸ್ಥಿತಿಯೂ ನಿರ್ಮಾಣವಾಗುತ್ತಿದೆ.
ಹಲವು ವರ್ಷಗಳಿಂದ ರಸ್ತೆ ಸಮಸ್ಯೆ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸುತ್ತಲೇ ಇದ್ದಾರೆ. ಗ್ರಾಮ ಪಂಚಾಯಿತಿ, ತಾಲೂಕು ಆಡಳಿತ, ಜನಪ್ರತಿನಿಧಿಗಳು ಎಲ್ಲರಿಗೂ ಮನವಿ ಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ. ಚುನಾವಣೆ ಬಂದಾಗ ಮಾತ್ರ ಗ್ರಾಮಕ್ಕೆ ಭೇಟಿ ಕೊಡುವ ರಾಜಕಾರಣಿಗಳು ಬಳಿಕ ಜನರ ಸಮಸ್ಯೆ ಮರೆತು ಬಿಡುತ್ತಾರೆ ಎನ್ನುವ ಕೋಪ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ. “ಮತ ಕೇಳೋಕೆ ಬರ್ತಾರೆ… ರಸ್ತೆ ಮಾಡಿಸೋಕೆ ಬರಲ್ಲ” ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಕೋಟಿ ಯೋಜನೆಗಳ ಘೋಷಣೆ ಆಗುತ್ತಿದ್ದರೂ, ಮಂಟೂರ್ ಗ್ರಾಮದ ಜನರು ಮಾತ್ರ ಇನ್ನೂ ಮೂಲಭೂತ ಸೌಕರ್ಯಕ್ಕಾಗಿ ಹೋರಾಟ ನಡೆಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆ ಅಭಿವೃದ್ಧಿಗೆ ಮುಂದಾಗುತ್ತಾರಾ? ಅಥವಾ ದೊಡ್ಡ ಅನಾಹುತ ಸಂಭವಿಸಿದ ಬಳಿಕವೇ ಕ್ರಮ ಕೈಗೊಳ್ಳುತ್ತಾರಾ ಎನ್ನುವುದು ಈಗಿನ ಪ್ರಶ್ನೆಯಾಗಿದೆ.




