ಇಸ್ಪೀಟ್ ಆಡೋದ್ರಲ್ಲೇ ಟೈಮ್ ವೇಸ್ಟ್ ಮಾಡ್ತಾರೆ – ರೈತರಿಗೆ ಅವಮಾನಿಸಿದ ಬಿಜೆಪಿ ಸಂಸದ!

ಮಧ್ಯಪ್ರದೇಶದಲ್ಲಿ ಬಿಜೆಪಿ ಸಂಸದರೊಬ್ಬರು ರೈತರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯೊಂದು ಈಗ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. “ಇಂದಿನ ರೈತರು ವರ್ಷದಲ್ಲಿ ಮೂರೇ ತಿಂಗಳು ಕೆಲಸ ಮಾಡುತ್ತಾರೆ, ಉಳಿದ ಒಂಬತ್ತು ತಿಂಗಳು ಇಸ್ಪೀಟ್ ಆಡ್ಕೊಂಡು, ಗುಟ್ಕಾ ತಿನ್ಕೊಂಡು ಕಾಲ ಕಳೆಯುತ್ತಾರೆ” ಅಂತ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಹೇಳಿದ್ದಾರೆ.

ಮೌಗಂಜ್ ಜಿಲ್ಲೆಯಲ್ಲಿ ನಡೆದ ಗೋವರ್ಧನ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ, ಹಿಂದಿನ ಕಾಲದ ರೈತರಿಗಿಂತ ಇಂದಿನ ರೈತರು ಆರಾಮದಾಯಕ ಜೀವನಕ್ಕೆ ಒಗ್ಗಿಕೊಂಡಿದ್ದಾರೆ ಎಂದು ಜರಿದರು. ರೈತರು ಮೂರು ತಿಂಗಳು ಮಾತ್ರ ಹೊಲದಲ್ಲಿ ಕಷ್ಟಪಡ್ತಾರೆ, ಉಳಿದ ಒಂಬತ್ತು ತಿಂಗಳು ಮದ್ಯ ಕುಡಿಯೋದು, ಗಾಂಜಾ ಸೇದೋದು ಮತ್ತು ಇಸ್ಪೀಟ್ ಆಡೋದ್ರಲ್ಲೇ ಟೈಮ್ ವೇಸ್ಟ್ ಮಾಡ್ತಾರೆ ಅಂತೆಲ್ಲಾ ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ. ಸದ್ಯ ಈ ಮಾತಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಸಂಸದರ ಈ ಬೇಜವಾಬ್ದಾರಿ ಹೇಳಿಕೆಗೆ ಕಾಂಗ್ರೆಸ್ ಪಕ್ಷ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, “ವರ್ಷಪೂರ್ತಿ ಬಿಸಿಲು, ಮಳೆ ಎನ್ನದೆ ಹೊಲದಲ್ಲಿ ಬೆವರು ಹರಿಸಿ, ಸಾಲ ಮಾಡಿ ಅನ್ನ ನೀಡುವ ರೈತರಿಗೆ ಇದು ನೇರವಾದ ಅವಮಾನ” ಎಂದು ಕಾಂಗ್ರೆಸ್ ವಕ್ತಾರರು ಕಿಡಿಕಾರಿದ್ದಾರೆ. ದೇಶಕ್ಕೆ ಅನ್ನ ಹಾಕುವ ರೈತರನ್ನು ಈ ರೀತಿಯಾಗಿ ಹೀಯಾಳಿಸುವುದು ಬಿಜೆಪಿಯ ರೈತ ವಿರೋಧಿ ಮನಸ್ಥಿತಿಯನ್ನು ಬಯಲು ಮಾಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು, ಸಂಸದರು ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ.

About The Author