www.karnatakatv.net: ರಾಜ್ಯ- ಬೆಂಗಳೂರು: ವಸಿಷ್ಠ ಬ್ಯಾಂಕ್ ಕಳೆದ 8 ತಿಂಗಳಿಂದ ಠೇವಣಿದಾರರಿಗೆ ಬಡ್ಡಿ ಹಾಗೂ ಡಿವಿಡೆಂಟ್‍ಗಳನ್ನ ನೀಡದೇ ಗ್ರಾಹಕರನ್ನ ಅಲೆದಾಡಿಸುತ್ತಿದ್ದಾರೆ, ಇದಕ್ಕೆಲ್ಲಾ ಸ್ಥಳೀಯ ಬಸವನಗುಡಿ ಬಿಜೆಪಿ ಶಾಸಕ ರವಿಸುಬ್ರಹ್ಮಣ್ಯ ನೇರ ಚಿತಾವಣೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಆರೋಪಿಸಿದ್ದಾರೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 24 ವರ್ಷ ಹಳೆಯ ವಸಿಷ್ಠ ಸಹಕಾರಿ ಬ್ಯಾಂಕ್ ಸಂಪೂರ್ಣ ಮುಳುಗುವ ಹಂತದಲ್ಲಿದ್ದು, ಆಡಳಿತ ಮಂಡಳಿಯ ಅಕ್ರಮಚಟುವಟಿಕೆಗಳೇ ಕಾರಣ ಎಂದ್ರು. ಸಾವಿರಾರು ಹಿರಿಯ ನಾಗರಿಕರು ನಿವೃತ್ತಿ ನಂತರದ ಹಣವನ್ನ ತಮ್ಮ ಮಕ್ಕಳ ಮದುವೆ, ವಿದ್ಯಾಭ್ಯಾಸ ಇನ್ನಿತರೆ ಕಾರಣಗಳಿಗಾಗಿ ಠೇವಣಿ ಇಟ್ಟಿರುತ್ತಾರೆ. ಆದ್ರೆ, ಬ್ಯಾಂಕಿನ ಆಡಳಿತ ಮಂಡಳಿಯ ಪ್ರಮುಖ ನಿರ್ದೇಶಕ ಕೆ.ಎನ್.ವೆಂಕಟನಾರಾಯಣ ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ-ತಮ್ಮವರಿಗೆ ಕೋಟ್ಯಂತರ ರೂಪಾಯಿ ಸಾಲವನ್ನ ನೀಡಿ, ವಸೂಲಿ ಮಾಡದೇ ಠೇವಣಿದಾರರಿಗೆ ಮೋಸ ಮಾಡುತ್ತಿದ್ದಾರೆ. ಅಲ್ಲದೇ, ಈತ ಠೇವಣಿದಾರರ ಹಣವನ್ನ ರಿಯಲ್ ಎಸ್ಟೇಟ್, ಷೇರು ಮಾರುಕಟ್ಟೆ ಚಲನಚಿತ್ರರಂಗ ಇನ್ನಿತರೆ ಕ್ಷೇತ್ರಗಳಲ್ಲಿ ಲಾಭ ಮಾಡುವ ದುರುದ್ದೇಶದಿಂದ ತೊಡಗಿಸಿ ಕೊಂಡಿರುವುದೇ ಈ ಅನಾಹುತಕ್ಕೆ ಪ್ರಮುಖ ಕಾರಣ. ಇವರ ಈ ಕಾರ್ಯಕ್ಕೆ ಸ್ಥಳೀಯ ಶಾಸಕ ರವಿಸುಬ್ರಹ್ಮಣ್ಯರವರ ಬೆಂಬಲವಿದೆ, ಇದು ಬಿಜೆಪಿಗಳ ಮತ್ತೊಂದು ಐಎಂಎ ಹಗರಣ ಎಂದು ಜೈನ್ ಆರೋಪಿಸಿದ್ರು. ಅಲ್ಲದೇ, ಈ ಹಿಂದೆ ಗುರು ಸಾರ್ವಭೌಮ ಸಹಕಾರಿ ಬ್ಯಾಂಕ್ ನಲ್ಲೂ ಸಹ ಇದೇ ರೀತಿಯ ಸಾವಿರಾರು ಕೋಟಿ ಹಗರಣದಲ್ಲಿ ಶಾಸಕರ ಹಸ್ತಕ್ಷೇಪದ ಆರೋಪ ಕೇಳಿ ಬಂದಿತ್ತು. ಆದ್ರೆ, ಯಾವುದೇ ವಿಚಾರಣೆ ಸಹ ಆಗಿಲ್ಲ ಅಂತ ದರ್ಶನ್ ಜೈನ್ ಕಿಡಿಕಾರಿದ್ರು.